ರಾಜಸ್ತಾನದ ಜೋಧ್ಪುರದಲ್ಲಿ ವ್ಯಕ್ತಿಯೊಬ್ಬ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿದ್ದ. ಜುಲೈ 27ರಂದು ಆತನಿಗೆ ತೀವ್ರ ಹೊಟ್ಟೆ ನೋವು ಶುರುವಾಗಿತ್ತು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ ಹೊಟ್ಟೆಯಲ್ಲಿ ಲೋಹ ಇರುವುದು ಗೊತ್ತಾಗಿತ್ತು. ಆತ ನಾಣ್ಯಗಳನ್ನು ನುಂಗಿರೋದು ಎಕ್ಸರೇಯಲ್ಲಿ ಬೆಳಕಿಗೆ ಬಂದಿದೆ.
36 ವರ್ಷದ ಆ ಯುವಕ ಖಿನ್ನತೆಯಿಂದ ಬಳಲುತ್ತಿದ್ದನಂತೆ. ಕೇವಲ ಎರಡು ದಿನಗಳಲ್ಲಿ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿಹಾಕಿದ್ದ. ಎಂಡಿಎಂ ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಡಾ. ನಾಗೇಂದ್ರ ಭಾರ್ಗವ ನೇತೃತ್ವದ ವೈದ್ಯರ ತಂಡ ಎಂಡೋಸ್ಕೋಪಿಕ್ ಪ್ರಕ್ರಿಯೆ ಮೂಲಕ ಸತತ ಎರಡು ದಿನಗಳ ಕಾಲ ಆಪರೇಷನ್ ಮಾಡಿ ಆ ನಾಣ್ಯಗಳನ್ನೆಲ್ಲ ಹೊಟ್ಟೆಯಿಂದ ಹೊರತೆಗೆದಿದೆ.
ತನಗೆ ಹೊಟ್ಟೆನೋವಿದೆ, ತಾನು 10-15 ನಾಣ್ಯಗಳನ್ನು ನುಂಗಿದ್ದೆ ಅಂತಾ ಆತ ವೈದ್ಯರ ಬಳಿ ಹೇಳಿದ್ದ. ಆದ್ರೆ ತಪಾಸಣೆ ವೇಳೆ ಭಾರಿ ಗಾತ್ರದ ಲೋಹವಿರೋದು ಪತ್ತೆಯಾಗಿತ್ತು. ಖಿನ್ನತೆಯಿಂದಾಗಿ ಇದೇ ರೀತಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ಯುವಕ ನುಂಗುವ ಅಭ್ಯಾಸ ಮಾಡಿಕೊಂಡಿದ್ದು, ಆತನಿಗೆ ಮನೋರೋಗದ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.