ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 27 ವರ್ಷದ ನಿತೇಶ್ ಎಂಬ ಯುವಕ ಮೃತಪಟ್ಟಿದ್ದಾನೆ. ಅಕ್ಟೋಬರ್ 12ರಂದು ರಂಜಿತ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮತ್ತೊಂದು ಗುಂಪಿನ ಯುವಕರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ನಿತೇಶ್ ಶನಿವಾರದಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇದೀಗ ಪೊಲೀಸರಿಗೆ ಮಾರಾಮಾರಿಯ ಸಿಸಿ ಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಮಾರಣಾಂತಿಕ ಹಲ್ಲೆಗೂ ಮುನ್ನ ಉಭಯ ಗುಂಪುಗಳ ನಡುವೆ ಘರ್ಷಣೆ ನಡೆದಿರುವುದು ಇದರಲ್ಲಿ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಾವಳಿಯಂತೆ ನಿತೇಶ್, ಅಲೋಕ್ ಹಾಗೂ ಮೊಂಟಿ ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಬರುತ್ತಿದ್ದವರನ್ನು ತಡೆದಿದ್ದಾರೆ.
ಬಳಿಕ ಅವರುಗಳ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದು, ಬೈಕ್ ಸವಾರರೂ ಸಹ ಪ್ರತಿ ಹಲ್ಲೆ ಮಾಡಿದ್ದಾರೆ. ಅಂತಿಮವಾಗಿ ನಿತೇಶ್ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದು, ಪ್ರಜ್ಞೆ ತಪ್ಪಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಇದರ ಮಧ್ಯೆ ನವದೆಹಲಿಯಲ್ಲಿ ಮಾತನಾಡಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಈ ಹಿಂದೆ ರಿಂಕು ಶರ್ಮಾ, ಧೃವ್ ತ್ಯಾಗಿ, ಅಂಕಿತ್, ಡಾ. ನಾರಂಗ್, ರಾಹುಲ್ ಮನೀಶ್ ಎಂಬವರ ಕೊಲೆಯಾಗಿದ್ದು ಈಗ ನಿತೇಶ್ ಆ ಸಾಲಿಗೆ ಸೇರಿದ್ದಾನೆ. ದೆಹಲಿಯ ಕೆಲವು ಬಡಾವಣೆಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.