ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಮಾತೇ ಇಲ್ಲ ಎಂದು ಹೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಕಾಲೆಳೆದಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೂ ಯಡಿಯೂರಪ್ಪ ಮತ್ತೆ ರಾಜ್ಯದ ಸಿಎಂ ಆಗಲ್ಲ ಎಂದು ಹೇಳಿದರು.
ಕಣ್ಣೀರು ಸುಮ್ಮ ಸುಮ್ಮನೇ ಬರುತ್ತಾ..? ಯಡಿಯೂರಪ್ಪನವರೇ…… ಆವತ್ತು ಯಡಿಯೂರಪ್ಪ ರಾಜೀನಾಮೆ ನೀಡುವಾಗ ನೋವಿನಿಂದ ವ್ಯಂಗ್ಯವಾಗಿ ಅಳುತ್ತಿದ್ದರು. ಯಡಿಯೂರಪ್ಪರನ್ನು ಬಿಜೆಪಿ ಸುಮ್ಮ ಸುಮ್ಮನೇ ಅಧಿಕಾರದಿಂದ ಕೆಳಗೆ ಇಳಿಸಿದೆ. ವಾಜಪೇಯಿಗೂ 2ನೇ ಬಾರಿ ಅಧಿಕಾರಕ್ಕೆ ಬರಲು ಆಗಲಿಲ್ಲ. ಯಡಿಯೂರಪ್ಪರ ಸ್ಥಿತಿ ಕೂಡ ಹಾಗೆ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ನಾನು ಜನರ ಬಳಿ ಹೋಗುತ್ತೇನೆ. ರಾಜ್ಯದಲ್ಲಿ 150 ಸೀಟುಗಳನ್ನು ಗೆಲ್ಲುತ್ತೇನೆ ಅಂದಿದ್ದಾರೆ. ನೀವು ಇತ್ತೀಚಿನ ದಿನಗಳಲ್ಲಿ ಜನರ ಬಳಿ ಹೋಗಿಲ್ಲ ಎಂದೆನಿಸುತ್ತದೆ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಾಕಷ್ಟು ಸ್ಥಳೀಯ ಚುನಾವಣೆಗಳು, ಬೈ ಎಲೆಕ್ಷನ್ಗಳು ಆಗಿವೆ. ಅಲ್ಲೆಲ್ಲ ಕಾಂಗ್ರೆಸ್ ಮೊದಲ ಸ್ಥಾನ, ಬಿಜೆಪಿ 2 ಹಾಗೂ ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಭ್ರಮೆಯಿಂದ ಹೊರಬನ್ನಿ ಎಂದು ಹೇಳಿದರು.
ಉತ್ತರ ಪ್ರದೇಶದ ರಾಜಕೀಯವೇ ಬೇರೆ. ಕರ್ನಾಟಕದ ರಾಜಕೀಯವೇ ಬೇರೆ. ನೀವು ಹಿಂದೆ ಅಧಿಕಾರವಿದ್ದ ರಾಜ್ಯಗಳಲ್ಲಿ ಮಾತ್ರ ಗೆದ್ದಿದ್ದೀರಿ ಹೊರತು ಹೊಸ ರಾಜ್ಯದಲ್ಲಿ ನಿಮ್ಮ ಶಕ್ತಿ ಪ್ರದರ್ಶನ ಮಾಡಿಲ್ಲ. ಪಂಜಾಬ್ನಲ್ಲಿ ಕಾಂಗ್ರೆಸ್ ತನ್ನದೇ ತಪ್ಪಿನಿಂದ ಸೋತಿದೆ. ಜನರ ಆದೇಶವನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದರು.