ಲಕ್ನೋ: ಉತ್ತರ ಪ್ರದೇಶದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಮಧ್ಯೆ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿದೆ. ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿವೆ. ಏಳು ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯ ಪರ ಪ್ರಚಾರ ಮಾಡಿದ್ದು, ಎಲ್ಲರ ಗಮನಸೆಳೆದಿದೆ.
ಅಯೋಧ್ಯೆಯಿಂದ ಸಮಾಜವಾದಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ತನ್ನ ತಂದೆ ತೇಜ್ ನಾರಾಯಣ ಪಾಂಡೆ ಪರ 7 ವರ್ಷದ ಬಾಲಕಿ ಪ್ರಚಾರ ಆರಂಭಿಸಿದ್ದಾಳೆ.
ಮೂರನೇ ತರಗತಿ ವಿದ್ಯಾರ್ಥಿನಿಯಾಗಿರುವ ಗೌರಿ ಪಾಂಡೆ ತನ್ನ ತಂದೆಗಾಗಿ ಬೆಳಗ್ಗೆ ಬೇಗನೆ ಎದ್ದು ಮನೆ-ಮನೆಗೆ ತೆರಳಿ ತನ್ನ ತಂದೆಯ ಪರವಾಗಿ ಮತಯಾಚನೆ ಮಾಡುತ್ತಿದ್ದಾಳೆ.
ಬೆಳಗ್ಗೆ ಮತಯಾಚನೆ ಮಾಡಿ ನಂತರ ಶಾಲೆಗೆ ತೆರಳುವ ಬಾಲಕಿ, ಸಂಜೆ ಮತ್ತೆ ತಂದೆಯ ಪರ ಮತಯಾಚನೆಯನ್ನು ಮುಂದುವರಿಸುತ್ತಾಳೆ. ಯುಪಿಯಲ್ಲಿ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಲು ತನ್ನ ತಂದೆಯ ಪರ ಮತ ಕೇಳುತ್ತಿರುವುದಾಗಿ ಬಾಲಕಿ ಗೌರಿ ತಿಳಿಸಿದ್ದಾಳೆ.
ಇನ್ನು ಮಾಜಿ ವಿದ್ಯಾರ್ಥಿ ನಾಯಕ ಪವನ್ ಪಾಂಡೆ ಮೂರನೇ ಬಾರಿಗೆ ಅಯೋಧ್ಯೆಯಿಂದ ಚುನಾವಣೆಗೆ ಸ್ಪರ್ಧಿಸುವ ಗುರಿ ಹೊಂದಿದ್ದಾರೆ. ಅವರು 2012 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಚೊಚ್ಚಲ ಚುನಾವಣೆಯನ್ನು ಗೆದ್ದು ವಿಧಾನಸಭೆ ಪ್ರವೇಶಿದ್ದರು.