ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ಸಂದರ್ಭದಲ್ಲಿ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ ಸಾವಿರಾರು ವಿದ್ಯಾರ್ಥಿಗಳು ವಾಪಸ್ ದೇಶಕ್ಕೆ ಬಂದಿದ್ದರು. ಇವರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾರತಕ್ಕೆ ಹೋಲಿಸಿದರೆ ವ್ಯಾಸಂಗ ವೆಚ್ಚ ಅಲ್ಲಿ ಕಡಿಮೆ ಎಂಬ ಕಾರಣಕ್ಕೆ ತೆರಳಿದ್ದರು.
ಇವರು ಭಾರತಕ್ಕೆ ಬಂದ ಬಳಿಕ ತಮಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಮುಂದಿನ ವ್ಯಾಸಂಗಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದು, ಕೇಂದ್ರ ಸರ್ಕಾರವು ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇದೀಗ ಇವರುಗಳ ನಿರೀಕ್ಷೆ ಹುಸಿಯಾಗಿದೆ.
ಗುರುವಾರದಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದು, ಉಕ್ರೇನ್ ನಿಂದ ಮರಳಿ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳು ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರಿಸುವ ಅನುಮತಿ ನೀಡುವ ಬಗ್ಗೆ ಯಾವುದೇ ಕಾನೂನುಗಳು ಇಲ್ಲ ಎಂದು ಹೇಳಿದೆ.
ಭಾರತೀಯ ವೈದ್ಯಕೀಯ ಕೌನ್ಸಿಲ್ ಕಾಯ್ದೆ 1956 ಅಥವಾ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ 2019ರ ಪ್ರಕಾರ ಇದಕ್ಕೆ ಅವಕಾಶವಿಲ್ಲವಾಗಿದ್ದು, ಹೀಗಾಗಿ ಭಾರತದ ಯಾವುದೇ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಅಥವಾ ವಿವಿಗಳಲ್ಲಿ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈವರೆಗೂ ಅವಕಾಶ ನೀಡಿಲ್ಲ ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದೆ.