ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿ ಒಂದೂವರೆ ತಿಂಗಳಾಗಿದೆ. ಲಕ್ಷಾಂತರ ಮಂದಿ ಉಕ್ರೇನ್ ತೊರೆದಿದ್ದಾರೆ. ಅನೇಕರು ತಮ್ಮ ಕುಟುಂಬಗಳಿಂದ ಬೇರ್ಪಟ್ಟಿದ್ದಾರೆ. ಪೋಲೆಂಡ್‌ನಂತಹ ನೆರೆಯ ದೇಶಗಳಿಗೆ ಮಕ್ಕಳು ಮಾತ್ರ ಪ್ರಯಾಣಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಇದರ ಮಧ್ಯೆ, ಅನೇಕ ಸಾಕುಪ್ರಾಣಿಗಳು ಕೂಡ ತಮ್ಮ ಮಾಲೀಕರಿಂದ ಬೇರ್ಪಡಿಸಲಾಗಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದು ಖಂಡಿತವಾಗಿಯೂ ನಿಮ್ಮ ಹೃದಯ ಗೆಲ್ಲುತ್ತದೆ. ಉಕ್ರೇನ್‌ನ ಯುದ್ಧದಿಂದ ಹಾನಿಗೊಳಗಾದ ನಗರ ಬುಚಾದಲ್ಲಿ ದೀರ್ಘಕಾಲದವರೆಗೆ ಬೇರ್ಪಟ್ಟ ನಂತರ ನಾಯಿ ತನ್ನ ಮಾಲೀಕರೊಂದಿಗೆ ಮತ್ತೆ ಸೇರುವುದನ್ನು ವಿಡಿಯೋದಲ್ಲಿ ನೋಡಬಹುದು. ಉಕ್ರೇನ್‌ನಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡುವ ಬೆಲಾರಸ್‌ನ ಸ್ವಯಂಸೇವಕ ಸಂಸ್ಥೆ ಕಸ್ಟಸ್ ಕಲಿನೋಸ್ಕಿ ಬೆಟಾಲಿಯನ್ ಮನಕಲಕುವ ಈ ವಿಡಿಯೋವನ್ನು ಹಂಚಿಕೊಂಡಿದೆ.
ನೆಸ್ಸಿ ಎಂಬ ಬಿಳಿ ಮತ್ತು ಕಪ್ಪು ಬಣ್ಣದ ನಾಯಿ, ತನ್ನ ಮಾಲೀಕರನ್ನು ನೋಡಿದ ನಂತರ ಆತನ ಕಡೆಗೆ ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶ್ವಾನವು ತನ್ನ ಯಜಮಾನನತ್ತ ಖುಷಿಯಿಂದ ನೆಗೆಯುತ್ತದೆ.
ಮಾಲೀಕನು ತನ್ನ ನಾಯಿಯೊಂದಿಗೆ ಮತ್ತೆ ಒಂದಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾನೆ. ಆತ ತನ್ನ ಪ್ರೀತಿಯ ನಾಯಿಯನ್ನು ನಿರಂತರವಾಗಿ ಚುಂಬಿಸಿದ್ದಾನೆ. ತನ್ನ ಶ್ವಾನವನ್ನು ಮತ್ತೆ ತನಗೆ ಸೇರಿಸಿದ್ದಕ್ಕೆ ಆತ ಸೈನಿಕರಿಗೆ ಧನ್ಯವಾದ ಅರ್ಪಿಸಿದ್ದಾನೆ. ತಮ್ಮ ಪುನರ್ಮಿಲನದ ಕ್ಷಣವನ್ನು ಆತ ಸೆಲ್ಫಿಯಲ್ಲಿ ತೆಗೆದುಕೊಂಡಿದ್ದಾನೆ. ನೆಟ್ಟಿಗರು ಕಣ್ಣೀರು ಹಾಕಿರುವ ಈ ವಿಡಿಯೋ ಇದುವರೆಗೆ 43 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು, ವೈರಲ್ ಆಗಿದೆ. ಶ್ವಾನ ಮತ್ತು ಅದರ ಮಾಲೀಕನ ಪುನರ್ಮಿಲನ ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.