ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಹೇಗಾದ್ರೂ ಮಾಡಿ ಪ್ರಾಣ ಉಳಿಸಿಕೊಳ್ಳಲು ಸುಮಾರು ಮೂರು ಮಿಲಿಯನ್ ಉಕ್ರೇನಿಯನ್ನರು ದೇಶ ತೊರೆದಿದ್ದಾರೆ. ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ, ರೊಮೇನಿಯಾ ಮತ್ತು ಮೊಲ್ಡೊವಾದಲ್ಲಿ ಆಶ್ರಯ ಪಡೆದಿದ್ದಾರೆ.
ಇವರಲ್ಲಿ ಅರ್ಧದಷ್ಟು ಮಕ್ಕಳಿದ್ದಾರೆ. ಕೆಲ ದಿನಗಳ ಹಿಂದಷ್ಟೆ 11 ವರ್ಷದ ಬಾಲಕನೊಬ್ಬ 1100 ಕಿಮೀ ದೂರವನ್ನು ಏಕಾಂಗಿಯಾಗಿ ಕ್ರಮಿಸಿ ಸ್ಲೋವಾಕಿಯಾಗೆ ತಲುಪಿದ್ದಾನೆ. ಅವನ ಕೈಮೇಲೆ ಬರೆದಿದ್ದ ಫೋನ್ ನಂಬರ್ ಬಿಟ್ರೆ ಬೇರೆ ಯಾವ ಮಾಹಿತಿಯೂ ಇರಲಿಲ್ಲ.
ಕೊನೆಗೂ ಆ ಮಗುವಿನ ತಾಯಿಯನ್ನು ಪತ್ತೆ ಮಾಡಲಾಗಿದೆ. ಅಮ್ಮ-ಮಗನ ಹೃದಯಸ್ಪರ್ಶಿ ಭೇಟಿಯ ಚಿತ್ರಗಳು ಈಗ ವೈರಲ್ ಆಗಿವೆ. 11 ವರ್ಷದ ಈ ಮಗುವಿನ ಹೆಸರು ಹಸನ್ ಪಿಸೇಕ. ಆಗ್ನೇಯ ಉಕ್ರೇನ್‌ನ ಝಪೊರಿಜ್ಜ್ಯಾದಲ್ಲಿ ಇವನ ಮನೆಯಿತ್ತು. ಕಳೆದ ವಾರ ರಷ್ಯಾದ ಪಡೆಗಳು ಈ ಭಾಗದ ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಸಂಬಂಧಿಯನ್ನು ನೋಡಿಕೊಳ್ಳಲು ಬಾಲಕನ ಪೋಷಕರು ಉಕ್ರೇನ್‌ಗೆ ಹಿಂತಿರುಗಬೇಕಾಯಿತು. ಕೈಯ್ಯಲ್ಲೊಂದು ಬ್ಯಾಗ್, ಪಾಸ್ಪೋರ್ಟ್ ಹಾಗೂ ಫೋನ್ ನಂಬರ್ ಬಿಟ್ರೆ ಬಾಲಕನ ಬಳಿ ಇನ್ನೇನೂ ಇರಲಿಲ್ಲ. ಒಬ್ಬಂಟಿಯಾಗಿಯೇ ಹಸನ್, ಸ್ಲೊವಾಕಿಯಾ ತಲುಪಿದ್ದಾನೆ. ಪಾಸ್ಪೋರ್ಟ್ ಪರಿಶೀಲಿಸಿದ ಅಲ್ಲಿನ ಅಧಿಕಾರಿಗಳು ಆತನಿಗೆ ಆಸರೆ ನೀಡಿದ್ದಾರೆ.
ಇದೀಗ ಹಸನ್‌ನ ತಾಯಿ, ಅಜ್ಜಿ ಮತ್ತು ಅವರು ಸಾಕಿಕೊಂಡಿದ್ದ ಪ್ರೀತಿಯ ನಾಯಿಗೆ ಕೂಡ ಸ್ಲೊವಾಕಿಯಾಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ. ರೈಲಿನ ಮೂಲಕ ಇಡೀ ಕುಟುಂಬ ಸ್ಲೊವಾಕಿಯಾಕ್ಕೆ ಬಂದಿಳಿದಿದ್ದು, ಹಸನ್ ನನ್ನು ಭೇಟಿಯಾಗಿದೆ. ಎಲ್ಲವನ್ನೂ ಕಳೆದುಕೊಂಡಿರುವ ನಾವು ಹೊಸ ಬದುಕು ಪ್ರಾರಂಭಿಸಬೇಕೆಂದು ಬಾಲಕನ ತಾಯಿ ಹೇಳಿದ್ದಾರೆ.