ಯುದ್ಧಪೀಡಿತ ಉಕ್ರೇನ್ನಿಂದ ನೂರಾರು ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಕೇಂದ್ರದ ಪ್ರಾಮಾಣಿಕ ಪ್ರಯತ್ನಗಳನ್ನು ಶ್ಲಾಘಿಸಿದ ಸರ್ವೋಚ್ಛ ನ್ಯಾಯಾಲಯವು ಜನರ ಆತಂಕದ ಬಗ್ಗೆ ನಮಗೂ ಕಾಳಜಿ ಇದೆ ಎಂದು ಹೇಳಿದೆ.
ಉಕ್ರೇನ್ ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡಿರುವ 17 ಸಾವಿರ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಜನರನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಉಕ್ರೇನ್ ರೊಮೇನಿಯಾ ಗಡಿಯಲ್ಲಿ ಸಿಲುಕಿರುವ ಬೆಂಗಳೂರಿನ ನಿವಾಸಿ ಫಾತಿಮಾ ಅಹಾನಾ ಸೇರಿದಂತೆ ಹಲವಾರು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಕೈಗೊಂಡ ಪ್ರಯತ್ನಗಳನ್ನು ಶ್ಲಾಘಿಸಿದರು.
ಉಕ್ರೇನ್‌ನ ಸಂಘರ್ಷ ವಲಯದಿಂದ ಒಟ್ಟು 17,000 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ವೇಣುಗೋಪಾಲ್ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಹಿಮಾ ಕೊಲ್ಹಿ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.
ಕೇಂದ್ರದ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ನಾವು ಅದರ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಆದರೆ ನಮಗೂ ಕಾಳಜಿ ಇದೆ” ಎಂದು ಪೀಠ ಹೇಳಿದೆ. ಹಿಂದಿನ ತಪ್ಪುಗಳಿಂದ ಪಾಠವನ್ನು ಕಲಿಯದೇ ಯುದ್ಧಕ್ಕೆ ಮುಂದಾಗಿರುವುದು ದುರದೃಷ್ಟಕರವಾಗಿದೆ. ನಮಗೆ ಈ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ ವಿದ್ಯಾರ್ಥಿಗಳ ಬಗ್ಗೆ ಆತಂಕವಿದೆ ಎಂದಿದೆ.