ಹಬ್ಬದ ದಿನ ಸಾಮಾನ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದಿಲ್ಲ. ಏನಾದ್ರೂ ಸಿಹಿ ತಿನಿಸಿನ ಜೊತೆಗೆ ಸಿಂಪಲ್ ಆದ ರುಚಿಯಾದ ಅಡುಗೆ ಮಾಡೇ ಮಾಡ್ತಾರೆ. ಈ ಬಾರಿ ಯುಗಾದಿ ಹಬ್ಬದ ಸೊಬಗನ್ನು ಸವಿಯಲು ಈ ಕೋಕೋನಟ್ ರೈಸ್ ಅನ್ನು ನೀವು ಟ್ರೈ ಮಾಡಿ ನೋಡಿ. ಇದನ್ನು ಹೇಗೆ ಮಾಡೋದು, ಏನೇನು ಸಾಮಗ್ರಿಗಳು ಬೇಕು ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿ : ಅರ್ಧ ಕಪ್ ಅನ್ನ, ಅರ್ಧ ಕಪ್ ತೆಂಗಿನ ತುರಿ, 2-3 ಚಮಚ ತೆಂಗಿನೆಣ್ಣೆ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಉದ್ದಿನ ಬೇಳೆ, ಅರ್ಧ ಚಮಚ ಕಡಲೆ ಬೇಳೆ, ಸ್ವಲ್ಪ ಗೋಡಂಬಿ, ಹೆಚ್ಚಿದ ಅರ್ಧ ಹಸಿಮೆಣಸಿನ ಕಾಯಿ, 1 ಚಮಚದಷ್ಟು ಹೆಚ್ಚಿದ ಶುಂಠಿ, ಚಿಟಿಕೆ ಇಂಗು, 5-6 ಕರಿಬೇವಿನ ಎಲೆ, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ : ಬಾಣೆಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ. ಅದು ಚಟಪಟನೆ ಸಿಡಿದ ಬಳಿಕ ಗೋಡಂಬಿ, ಹಸಿಮೆಣಸಿನಕಾಯಿ, ಶುಂಠಿ, ಇಂಗು, ಕರಿಬೇವು ಹಾಕಿ ಹುರಿಯಿರಿ. ನಂತರ ತೆಂಗಿನ ತುರಿ ಹಾಕಿ ಅದು ಹೊಂಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಮಾಡಿಟ್ಟುಕೊಂಡ ಅನ್ನವನ್ನ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕೋಕೋನಟ್ ರೈಸ್ ರೆಡಿಯಾಗುತ್ತದೆ.