ಪ್ರತಿಯೊಂದು ಹಬ್ಬ, ಆಚರಣೆಗಳಿಗೆ ಅದರದ್ದೇ ಆದ ಹಿನ್ನಲೆ, ಮಹತ್ವ ಇರುತ್ತದೆ. ಯುಗಾದಿಯನ್ನು ಹೊಸ ವರ್ಷವೆಂದೂ ಕರೆಯಲಾಗುತ್ತದೆ. ಯುಗಾದಿಯಲ್ಲಿ ಮರ, ಗಿಡಗಳೆಲ್ಲ ನಳನಳಿಸುತ್ತವೆ. ‘ಮಳೆಗಾಲದಲ್ಲಿ ಭೂಮಿ ಚೆಂದ, ಯುಗಾದಿಯಲ್ಲಿ ಗೋಡೆ ಚೆಂದ’ ಎಂಬ ಮಾತಿದೆ.
ಮಳೆಗಾಲದಲ್ಲಿ ಪ್ರಕೃತಿ ಹಸಿರಿನಿಂದ ಕಂಗೊಳಿಸಿದರೆ, ಯುಗಾದಿ ಹಬ್ಬದ ವೇಳೆಯಲ್ಲಿ ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಸುಣ್ಣ, ಬಣ್ಣ ಬಳಿಯಲಾಗುತ್ತದೆ. ಗೋಡೆಗಳು ಅಂದವಾಗಿ ಕಾಣುತ್ತವೆ. ಬೇವು, ಮಾವಿನ ಎಲೆಗಳಿಂದ ಮನೆಗೆ ತೋರಣ ಕಟ್ಟಲಾಗುತ್ತದೆ.
ಇನ್ನು ಯುಗಾದಿ ಹಬ್ಬದ ಆಚರಣೆಯೂ ವಿಶೇಷವಾಗಿದೆ. ಎಣ್ಣೆ ಸ್ನಾನ, ಸಿಹಿ ಅಡುಗೆ ಮಾಡಿ ಮನೆ ಮಂದಿಯೆಲ್ಲಾ ಸೇರಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಸಂಜೆ ಚಂದ್ರನ ದರ್ಶನ ಮಾಡಿ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ. ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಬೇವು-ಬೆಲ್ಲವನ್ನು ಹಂಚುತ್ತಾರೆ.
ಯುಗಾದಿಯಂದು ಚಂದ್ರನ ದರ್ಶನ ಮಾಡಿ ದೇವಾಲಯಕ್ಕೆ ತೆರಳಿದರೆ ಮತ್ತು ಹಿರಿಯರ ಆಶೀರ್ವಾದ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಕೆಲಸ ಮತ್ತಿತರ ಕಾರಣಗಳಿಂದ ಬೇರೆ ಕಡೆ ನೆಲೆಸಿದವರೆಲ್ಲಾ ಇದೇ ಕಾರಣಕ್ಕೆ ಯುಗಾದಿ ಹಬ್ಬಕ್ಕೆ ಊರಿಗೆ ಬರುತ್ತಾರೆ.