ಯುಎಇ ನಲ್ಲಿ ಸುಧಾರಿತ ಹೊಸ ವೀಸಾ ನಿಯಮ ಜಾರಿ ಮಾಡಲಾಗಿದ್ದು, ಇದರಿಂದ ಭಾರತೀಯ ನಾಗರೀಕರಿಗೆ ಒಳಿತಾಗಲಿದೆ ಎನ್ನಲಾಗಿದೆ. ಈ ಹೊಸ ವೀಸಾ ನಿಯಮದಿಂದ ವಿವಿಧ ವಲಯಗಳ ಉದ್ಯೋಗಕ್ಕಾಗಿ ಯುಎಇಗೆ ತೆರಳುವವರಿಗೆ ಅನುಕೂಲ ಆಗಲಿದೆಯಂತೆ.
ಹೌದು, ಸುಧಾರಿತ ವೀಸಾಗೆ ಕಳೆದ ಏಪ್ರಿಲ್ ತಿಂಗಳಲ್ಲಿ ಎಮಿರೆಟ್ಸ್ ಸಂಪುಟ ಒಪ್ಪಿಗೆ ನೀಡಿತ್ತು. ಹೊಸ ವೀಸಾ ನೀತಿಯನ್ನು ಸೋಮವಾರದಿಂದ ಅಧಿಕೃತವಾಗಿ ಜಾರಿಗೊಳಿಸಿದೆ. ಇನ್ನು ಹೊಸ ವೀಸಾದ ಅನುಕೂಲತೆ ನೋಡೋದಾದ್ರೆ, ಯುಎಇಗೆ ಬರುವ ಪ್ರವಾಸಿಗರು ಈ ಹಿಂದೆ 30 ದಿನ ಮಾತ್ರ ಉಳಿಯಬಹುದಿತ್ತು. ಆದರೆ ಇದೀಗ 60 ದಿನಗಳ ಕಾಲ ಉಳಿಯಬಹುದಾಗಿದೆ.
ಐದು ವರ್ಷಗಳ ಬಹು ಪ್ರವೇಶ ಪ್ರವಾಸಿ ವೀಸಾ ಪಡೆದವರು ದೇಶದಲ್ಲಿ ಇನ್ನು ಮುಂದೆ 180 ದಿನಗಳವರೆಗೆ ಯಾವುದೇ ಪ್ರಾಯೋಜಕರ ಅನುಮತಿ ಇಲ್ಲದೇ ಉಳಿಯಬಹುದಾಗಿದೆ. ಉದ್ಯೋಗ ಅರಸಿ ಯುಎಇಗೆ ಬರುವವರಿಗೆ ಯಾವುದೇ ಪ್ರಾಯೋಜಕರಿಲ್ಲದೆ ಪ್ರವಾಸಿ ವೀಸಾ ಪಡೆಯಬಹುದಾಗಿದೆ. ಇನ್ನು ಗೋಲ್ಡನ್ ವೀಸಾ ಪಡೆದವರಿಗೆ 10 ವರ್ಷಗಳವರೆಗೆ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಗೋಲ್ಡನ್ ವೀಸಾ ಪಡೆಯಲು ಹಿಂದೆ ಈ ಹಿಂದೆ ಇದ್ದ ಕನಿಷ್ಠ ವೇತನ ಪ್ರಮಾಣವನ್ನು ಇಳಿಸಲಾಗಿದೆ. ಹಿಂದೆ 50 ಸಾವಿರ ಧಿರಂ ಇತ್ತು. ಇದೀಗ 30 ಸಾವಿರ ಧಿರಂಗೆ ಇಳಿಕೆ ಮಾಡಲಾಗಿದೆ.