ಸರಿಯಾಗಿ ನಿದ್ರೆ ಆಗದಿದ್ದರೆ ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಯಾವುದೇ ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಇರುವುದಿಲ್ಲ.
ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ ಸಮಸ್ಯೆ ಕಾಡುತ್ತದೆ. ಆರೋಗ್ಯವಂತ ಮನುಷ್ಯನಿಗೆ ಸರಿಯಾಗಿ 8 ಗಂಟೆ ನಿದ್ದೆ ಅವಶ್ಯಕವಾಗಿರುತ್ತದೆ.
ಹಾಗಾಗಿ ಸರಿಯಾಗಿ ನಿದ್ರೆ ಬರುವುದಕ್ಕೆ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.
*ಸರಿಯಾದ ಸಮಯಕ್ಕೆ ಏಳುವುದನ್ನು ರೂಢಿಮಾಡಿಕೊಳ್ಳಬೇಕು. ರಜಾದಿನ ಇದ್ದಾಗ ತಡವಾಗಿ ಏಳುವುದು ಉಳಿದ ದಿನ ಬೇಗ ಏಳುವುದು ಈ ರೀತಿ ಮಾಡಬೇಡಿ. ಒಂದೇ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಂಡರೆ ನಿದ್ರಾಹೀನತೆ ಸಮಸ್ಯೆಯಿಂದ ಪಾರಾಗಬಹುದು.
*ಇನ್ನು ಟೀ, ಕಾಫಿ ಸೇವನೆ ಕಡಿಮೆ ಮಾಡಿ. ಕೆಲಸ ಮಾಡುವಾಗ ನಿದ್ರೆ ಬರದಂತೆ ತಡೆಯಲು, ಇನ್ನು ಕೆಲವರು ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಅತೀಯಾಗಿ ಟೀ, ಕಾಫಿ ಸೇವನೆ ಮಾಡುತ್ತಾರೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಜ್ಯೂಸ್, ಬಿಸಿ ನೀರು ಇಂತಹವುಗಳನ್ನು ಹೆಚ್ಚು ಸೇವಿಸಿ. ಇದರಿಂದ ದೇಹದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.
*ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ದೇಹದ ಮಾಂಸಖಂಡಗಳು, ನರಗಳು ಚೆನ್ನಾಗಿ ಕೆಲಸ ನಿರ್ವಹಿಸಿದರೆ ನಿದ್ರೆಯ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಮಲಗುವುದಕ್ಕೆ 3 ಗಂಟೆ ಮೊದಲೇ ವ್ಯಾಯಾಮದಂತಹ ಚಟುವಟಿಕೆ ಮಾಡಿ. ವ್ಯಾಯಾಮ ಮಾಡಿದ ತಕ್ಷಣವೇ ಮಲಗಬೇಡಿ.
*ಇನ್ನು ತಡವಾಗಿ ಮಲಗುವುದು, ಬೆಡ್ ರೂಮನಲ್ಲಿ ಮೊಬೈಲ್, ಟಿವಿಯನ್ನು ನೋಡುವುದು ಇದರಿಂದ ಕೂಡ ನಿದ್ರೆಯ ಸಮಸ್ಯೆ ತಲೆದೂರುತ್ತದೆ. ಫೋನ್ ಅನ್ನು ಸಾಧ್ಯವಾದಷ್ಟು ಬೆಡ್ ರೂಂನಿಂದ ದೂರವಿಡಿ. ಮಲಗುವಾಗ ಯಾವುದೇ ಅಡೆತಡೆಗಳು ಇರದಂತೆ ಎಚ್ಚರ ವಹಿಸಿ.
*ಊಟ ಮಾಡಿದ ತಕ್ಷಣ ಮಲಗುವುದು, ಅಥವಾ ನೀರು ಕುಡಿದ ತಕ್ಷಣ ಮಲಗುವುದು ಮಾಡಬೇಡಿ. ಇದು ನಿಮ್ಮ ಜೀರ್ಣಕ್ರೀಯೆ ಸಮಸ್ಯೆಗೆ ತೊಂದರೆಯನ್ನುಂಟು ಮಾಡುತ್ತದೆ. ಜಾಸ್ತಿ ನೀರು ಕುಡಿದು ಮಲಗುವುದರಿಂದ ಪದೇಪದೇ ಬಾತ್ ರೂಂ ಗೆ ಹೋಗಬೇಕಾಗುತ್ತದೆ. ಇದರಿಂದ ನಿದ್ರೆಗೆ ಭಂಗ ಬರುತ್ತದೆ.