ಪ್ರಪಂಚದಲ್ಲಿ ಅನೇಕ ನಿಗೂಢ ಸ್ಥಳಗಳಿವೆ, ಅದರ ರಹಸ್ಯಗಳನ್ನು ಇದುವರೆಗೆ ವಿಜ್ಞಾನಿಗಳಿಂದಲೂ ಬೇಧಿಸಲು ಸಾಧ್ಯವಾಗಿಲ್ಲ. ಇವುಗಳಲ್ಲೊಂದು ಅಮೇಜಾನ್ ಕಾಡಿನಲ್ಲಿ ಹರಿಯುವ ನದಿ. ಈ ನದಿಯ ನೀರು ಯಾವಾಗಲೂ ಬಿಸಿಯಾಗಿ ಕುದಿಯುತ್ತಿರುತ್ತದೆ. ಆಕಸ್ಮಿಕವಾಗಿ ಯಾರಾದರೂ ನದಿಗೆ ಬಿದ್ದರೆ ಕುದಿಯುವ ನೀರಲ್ಲಿ ಮೈಸುಟ್ಟುಕೊಂಡು ಸಾವು ಸಂಭವಿಸೋದು ಬಹುತೇಕ ಖಚಿತ.
ಈ ನದಿ ಇರೋದು ಪೆರುವಿನಲ್ಲಿ. 2011ರಲ್ಲಿ ಈ ನಿಗೂಢ ನದಿಯನ್ನು ಭೂವಿಜ್ಞಾನಿ ಆಂಡ್ರೆಸ್ ರುಜೊ ಪತ್ತೆ ಮಾಡಿದ್ದಾರೆ. ನದಿಯ ಹೆಸರು ಮಾಯಾಂಟುಯಾಕು. ನೀರು ಯಾವಾಗಲೂ ಕುದಿಯುತ್ತಿರೋದ್ರಿಂದ ನದಿಗೆ ಪ್ರಾಣಿಗಳು ಬಿದ್ದರೂ ಬದುಕಿ ಬರುವುದಿಲ್ಲ. ಮಾಯಾಂಟುಯಾಕು ನದಿಯ ಅನ್ವೇಷಣೆ ಇಂಟ್ರೆಸ್ಟಿಂಗ್ ಆಗಿದೆ.
ಆಂಡ್ರೆ ರುಜೋ ಬಾಲ್ಯದಿಂದಲೂ ಇಂತಹ ಕಾಲ್ಪನಿಕ ನದಿಗಳ ಕಥೆಗಳನ್ನು ಕೇಳಿದ್ದರಂತೆ. ಅದು ನಿಜವಾಗಿಯೂ ಅಸ್ತಿತ್ವದಲ್ಲಿದೆ ಅನ್ನೋದು ಅವರಿಗೆ ತಿಳಿದಿರಲಿಲ್ಲ. ಒಮ್ಮೆ ಹೀಗೆ ಸುತ್ತಾಡುತ್ತ ಅಮೇಜಾನ್ ಕಾಡುಗಳಿಗೆ ತೆರಳಿದ್ದಾರೆ. ಅಲ್ಲಿ ಈ ನಿಗೂಢ ನದಿಯ ದರ್ಶನ ಅವರಿಗಾಗಿದೆ. ಈ ನದಿ ಸುಮಾರು 7 ಕಿಲೋಮೀಟರ್ ಉದ್ದವಿದೆ. ಅಗಲ 80 ಅಡಿಗಳಷ್ಟಿದೆ. ಕೆಲವೊಂದು ಸ್ಥಳಗಳಲ್ಲಿ ನದಿಯ ಆಳ 16 ಅಡಿಗಳವರೆಗೆ ಇದೆಯಂತೆ.
ಈ ನೀರಿನಲ್ಲೇ ಚಹಾ ಕೂಡ ಮಾಡಬಹುದು, ಅಷ್ಟು ಬಿಸಿಯಾಗಿರುತ್ತದೆ. ಈ ನದಿಯ ಬಗೆಹರಿಯದ ರಹಸ್ಯಗಳನ್ನು ಬಯಲು ಮಾಡಲು ಸಂಶೋಧನೆ ಇನ್ನೂ ನಡೆಯುತ್ತಿದೆ. ನೈಸರ್ಗಿಕವಾಗಿ ಬಿಸಿಯಾದ ನದಿಯಾಗಿರೋದ್ರಿಂದ ವಿಜ್ಞಾನಿಗಳು ಇದನ್ನು ವಿಶ್ವದ ಅತಿದೊಡ್ಡ ಉಷ್ಣ ನದಿ ಎಂದು ಪರಿಗಣಿಸುತ್ತಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಈ ನದಿಯ ಸುತ್ತ ಯಾವುದೇ ಜ್ವಾಲಾಮುಖಿ ಇಲ್ಲ.
ಸಾಲ್ಟ್ ರಿವರ್ ಮತ್ತು ಹಾಟ್ ರಿವರ್ ಎಂಬ ಎರಡು ನದಿಗಳು ಅಮೆಜಾನ್ ಕಾಡುಗಳ ನಡುವೆ ಈ ನದಿಯಲ್ಲಿ ಸಂಧಿಸುತ್ತವೆ. ಈ ನದಿಯ ನೀರಿನ ತಾಪಮಾನವು 90 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಾಗಿರುತ್ತದೆ. ರುಜೋ ಈ ನದಿಯ ಬಗ್ಗೆ ‘ದಿ ಬಾಯ್ಲಿಂಗ್ ರಿವರ್: ಅಡ್ವೆಂಚರ್ ಅಂಡ್ ಡಿಸ್ಕವರಿ ಇನ್ ದಿ ಅಮೆಜಾನ್’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.