ಮೂವರು ಯಾತ್ರಾರ್ಥಿಗಳ ಮೇಲೆ ಟ್ರಕ್ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಯು ತಿರುಚ್ಚಿಯಲ್ಲಿ ನಡೆದಿದೆ. ಯಾತ್ರಾರ್ಥಿಗಳು ತಿರುಚ್ಚಿ-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಟೊಮ್ಯಾಟೋಗಳನ್ನು ಹೊತ್ತುಕೊಂಡು ಬರುತ್ತಿದ್ದ ಟ್ರಕ್ ಯಾತ್ರಾರ್ಥಿಗಳ ಮೇಲೆ ಹರಿದಿದೆ.
ಅಪಘಾತಕ್ಕೆ ಕಾರಣವಾದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕನ ವಿರುದ್ಧ ಮಾನಪ್ಪರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಸಮಯಪುರಂನಲ್ಲಿರುವ ಅರುಲ್ಮಿಗು ಮಾರಿಯಮ್ಮನ್ ದೇವಸ್ಥಾನಕ್ಕೆ ದಿಂಡುಗಲ್ ಜಿಲ್ಲೆಯ ಅಯ್ಯಲೂರು ಮತ್ತು ವೇದಸಂದೂರು ಸಮೀಪದ ಕುಗ್ರಾಮಗಳಿಂದ ಹಲವಾರು ಯಾತ್ರಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರೆ, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ನಾಲ್ವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಮೃತಪಟ್ಟವರನ್ನು ಎಸ್ ತಿರುನಾವುಕ್ಕರಸು (40) ಮತ್ತು ಪಿ ಸೇಕರ್ (27) ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿ ಕಾಳೇಶ್ವರಿ (33) ಚಿಕಿತ್ಸೆ ಫಲಕಾರಿಯಾಗದೆ ತಿರುಚ್ಚಿಯ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.