ನವದೆಹಲಿ- ದೆಹಲಿಯಲ್ಲಿ ಛತ್ ಪೂಜೆ ಹತ್ತಿರವಾಗುತ್ತಿದೆ. ಹೀಗಾಗಿ ಅಲ್ಲಿನ ಜಲ ಮಂಡಳಿ ಅಧಿಕಾರಿಗಳು ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ನದಿ ನೀರು ವಿಷಪೂರಿತವಾಗಿದ್ದು, ಕಲುಷಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ನೀರು ಕಲುಷಿತಗೊಂಡಿಲ್ಲ ಎಂಬುದನ್ನ ತೋರಿಸೋಕೆ ಅಧಿಕಾರಿಗಳೇ ಫೀಲ್ಡ್ ಗೆ ಇಳಿದಿದ್ದಾರೆ.
ಹೌದು, ಜಲ ಮಂಡಳಿ ನಿರ್ದೇಶಕ ಸಂಜಯ್ ಶರ್ಮಾ ಯಮುನಾ ನೀರು ಕಲುಷಿತ ಆಗಿಲ್ಲ ಎಂಬುದನ್ನು ತೋರಿಸೋಕೆ ಸ್ಥಳದಲ್ಲೇ ಸ್ನಾನ ಮಾಡಿದ್ದಾರೆ. ಜೊತೆಗೆ ನೀರು ಕಲುಷಿತಗೊಂಡಿಲ್ಲ ಎಂಬುದನ್ನು ನಿರೂಪಿಸಲು ವೀಡಿಯೋ ಮಾಡಿ ಜಲ ಮಂಡಳಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇನ್ನು ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಂಜಯ್ ಶರ್ಮಾ, ನೀರಿಗೆ ರಾಸಾಯನಿಕ ಸಿಂಪಡಿಸುವ ಮುನ್ನ ಬೇಕಾದ ಎಲ್ಲಾ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ನೀರು ಕಲುಷಿತಗೊಂಡಿಲ್ಲ. ಜೊತೆಗೆ ಈ ನೀರಿನಿಂದ ಯಾವುದೇ ಸಮಸ್ಯೆ ಕೂಡ ಆಗುವುದಿಲ್ಲ. ಇದಕ್ಕಾಗಿ ನಾನೇ ನೀರಿನಲ್ಲಿ ಸ್ನಾನ ಮಾಡಿದ್ದೇನೆ ಎಂದಿದ್ದಾರೆ. ಸುಳ್ಳು ಆರೋಪಗಳು ಕೇಳಿ ಬಂದ ಕಾರಣ ಸ್ವತಃ ನಾನೇ ಸ್ನಾನ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ ಎಂದಿದ್ದಾರೆ.