ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಕಳೆದ ಬಾರಿ ಚುನಾಯಿತರಾಗಿದ್ದ ಬಾದಾಮಿಯಿಂದ ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳಲಾಗುತ್ತಿದ್ದು, ಕೋಲಾರ ಸೇರಿದಂತೆ ಮೂರ್ನಾಲ್ಕು ಕ್ಷೇತ್ರಗಳ ಹೆಸರು ಕೇಳಿ ಬರುತ್ತಿದೆ.
ಇದರ ಮಧ್ಯೆ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯನವರ ಪುತ್ರ ಹಾಗೂ ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಂದೆಯವರಿಗೆ ವರುಣ ಕ್ಷೇತ್ರವನ್ನು ಬಿಟ್ಟು ಕೊಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯನವರಿಗೆ ವರುಣ ಅದೃಷ್ಟದ ಕ್ಷೇತ್ರವಾಗಿದ್ದು, ಇಲ್ಲಿಂದ ಗೆದ್ದಾಗೆಲ್ಲ ಅವರು ಅಧಿಕಾರ ಪಡೆದುಕೊಂಡಿದ್ದಾರೆ. ಈ ಬಾರಿಯೂ ಅವರು ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದೆ ಎಂದು ಕ್ಷೇತ್ರ ಬಿಟ್ಟು ಕೊಡುವ ಹಿಂದಿನ ಕಾರಣ ತಿಳಿಸಿದ್ದಾರೆ.
ಅಲ್ಲದೆ ಸಿದ್ದರಾಮಯ್ಯನವರು ವರುಣ ಕ್ಷೇತ್ರದಿಂದ ಕಣಕ್ಕಿಳಿದರೆ, ತಾವು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದೆ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿರುವ ಯತೀಂದ್ರ ಸಿದ್ದರಾಮಯ್ಯ, ಅವರು ಇಲ್ಲಿಂದಲೇ ಸ್ಪರ್ಧಿಸಬೇಕೆಂಬುದು ನಾನು ಮಾತ್ರವಲ್ಲ ಕ್ಷೇತ್ರದ ಹಾಗೂ ಕಾರ್ಯಕರ್ತರ ಬಯಕೆಯೂ ಸಹ ಆಗಿದೆ ಎಂದು ಹೇಳಿದ್ದಾರೆ.