ಶ್ರೀಕ್ಷೇತ್ರ ಯಡೂರಿನಲ್ಲಿದೆ ವೀರಭದ್ರನ ಪ್ರಸಿದ್ಧ ದೇವಸ್ಥಾನ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಹರಿದಿರುವ ಕೃಷ್ಣಾ ನದಿಯ ದಂಡೆಯ ಮೇಲೆ ಶ್ರೀ ವೀರಭದ್ರೇಶ್ವರನ ಈ ದೇವಸ್ಥಾನವಿದೆ.
ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವಲಿಂಗವನ್ನು ಶ್ರೀ ವಿರೂಪಾಕ್ಷ ಲಿಂಗ ಎಂದೂ ಕರೆಯಲಾಗುತ್ತದೆ. ಈ ದೇವಸ್ಥಾನವು 12 ನೆಯ ಶತಮಾನದ ಸಂದರ್ಭದಲ್ಲಿ ಕರ್ನಾಟಕದ ಪ್ರಖ್ಯಾತ ವೀರಶೈವ ಸಂತರಾದ ಕಾಡಸಿದ್ಧೇಶ್ವರರಿಂದ ಸ್ಥಾಪಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಇಂದಿಗೂ ಕಾಡಸಿದ್ಧೇಶ್ವರ ಮಠದ ಅಡಿಯಲ್ಲಿ ದೇಗುಲವು ನಿರ್ವಹಿಸಲ್ಪಡುತ್ತದೆ.
ಬ್ರಾಹ್ಮಣ ಸಮುದಾಯ ಹಾಗೂ ವೀರಶೈವ ಲಿಂಗಾಯತ ಸಮುದಾಯದವರ ಪವಿತ್ರ ಕ್ಷೇತ್ರವಾಗಿ ವೀರಭದ್ರೇಶ್ವರ ದೇವಸ್ಥಾನ ಸರ್ವರನ್ನು ಆಕರ್ಷಿಸುತ್ತದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಪಕ್ಕದ ಮಹಾರಾಷ್ಟ್ರದಿಂದಲೂ ಸಹ ಸಾಕಷ್ಟು ಜನ ಭಕ್ತಾದಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಇಲ್ಲಿ ಕನ್ನಡ, ಮರಾಠಿ ಭಾಷೆಗಳೆರಡೂ ಚಾಲ್ತಿಯಲ್ಲಿವೆ.