ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಿರಲಿಲ್ಲ. ಅವರು ಮೊಬೈಲ್ ಸ್ವಿಚ್ ಆಫ್ ಮಾಡಿದಿದ್ರೆ ಬಿಜೆಪಿಗೆ 50 ಸೀಟೂ ಬರುತ್ತಿರಲಿಲ್ಲ ಎಂದು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಮಾರ್ಮಿಕವಾಗಿ ಹೇಳಿದ್ದಾರೆ.
ಮೂಡಿಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ, ನನ್ನನ್ನು ಬಿಜೆಪಿಯಿಂದ ಹೊರ ಕಳಿಸಿದರು. ಚಿಕ್ಕಮಗಳೂರಿನ ಜನ ಅವರನ್ನು ಕ್ಷೇತ್ರದಿಂದಲೇ ಹೊರ ಕಳುಹಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದು, ನಾನು ಹೊರಹೋದ ಕಾರಣಕ್ಕೆ ಜಿಲ್ಲೆಯಲ್ಲಿ ಬಿಜೆಪಿಗೆ ಐದು ಸ್ಥಾನ ನಷ್ಟವಾಗಿದೆ ಎಂದು ಜನ ಹೇಳುತ್ತಿದ್ದಾರೆ ಎಂದರು.
ಚಿಕ್ಕಮಗಳೂರು ಇನ್ನು ಮುಂದೆ ವೀರಶೈವ – ಲಿಂಗಾಯಿತರ ಕ್ಷೇತ್ರವಾಗಲಿದ್ದು, ದತ್ತಪೀಠ, ಅಹಿತಕರ ಘಟನೆಗಳನ್ನೇ ಮುಂದಿಟ್ಟುಕೊಂಡು ಮತ ಕೇಳಿದ ಸಿ.ಟಿ. ರವಿಯವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಮೂಡಿಗೆರೆಯಲ್ಲಿ ಜೆಡಿಎಸ್ ಬೂತ್ ಕಮಿಟಿ ಹೊಂದಿಲ್ಲದ ಕಾರಣಕ್ಕೆ ನಾನು ಸೋಲಬೇಕಾಯಿತು ಎಂದು ಹೇಳಿದರು.