ದೆಹಲಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನಕಲಿ ಪ್ರೊಫೈಲ್ ಬಳಸಿ ನೂರಕ್ಕೂ ಹೆಚ್ಚು ಯುವತಿಯರನ್ನು ವಂಚಿಸಿರುವ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಬಳಸಿಕೊಂಡು, 100ಕ್ಕೂ ಹೆಚ್ಚು ಯುವತಿಯರನ್ನು ವಂಚಿಸಿದ 35 ವರ್ಷದ ವಿವಾಹಿತ ವ್ಯಕ್ತಿಯನ್ನು ದೆಹಲಿ ಸೈಬರ್ ಪೊಲೀಸ್ (ದಕ್ಷಿಣ ಜಿಲ್ಲೆ) ಬಂಧಿಸಿದೆ. ಈತ ನಕಲಿ ಗುರುತನ್ನು ಬಳಸಿಕೊಂಡು, ತಾನು ಅತ್ಯಂತ ಶ್ರೀಮಂತ ಅವಿವಾಹಿತ ವ್ಯಕ್ತಿ ಎಂದು ಪೋಸ್ ನೀಡುತ್ತಿದ್ದ. ಮದುವೆಯಾಗಲು ಬಯಸುವ ಯುವತಿಯರ ಬಳಿ ನಂಬಿಕಸ್ಥನಂತೆ ನಟಿಸುತ್ತಿದ್ದ. ಅಲ್ಲದೆ ತನ್ನ ವ್ಯಾಪಾರ ವ್ಯವಹಾರಗಳಿಗಾಗಿ ಅವರಿಂದ ಹಣ ಪೀಕುತ್ತಿದ್ದ.
ಮಾರ್ಚ್ ನಲ್ಲಿ, ಎಐಐಎಂಎಸ್‌ನ ಮಹಿಳಾ ವೈದ್ಯರೊಬ್ಬರು ತಮ್ಮ ವ್ಯವಹಾರಕ್ಕೆ ಅಗತ್ಯವಿರುವ ನೆಪದಲ್ಲಿ ಸುಮಾರು 15 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ ವ್ಯಕ್ತಿಯ ವಿರುದ್ಧ ಸೈಬರ್ ಸೆಲ್‌ಗೆ ದೂರು ನೀಡಿದ್ದರು. ಆನ್‌ಲೈನ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದ ಬಗ್ಗೆ ವೈದ್ಯೆ ತಿಳಿಸಿದ್ದಾರೆ.
ಬ್ಯಾಂಕ್‌ಗಳು ಮತ್ತು ಇತರ ಪೋರ್ಟಲ್‌ಗಳಿಂದ ವಿವರಗಳನ್ನು ಸಂಗ್ರಹಿಸಿದ ಸೈಬರ್ ಕ್ರೈಮ್ ಪೊಲೀಸರು, ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡಿದ್ದಾರೆ. ನಂತರ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಈ ವೇಳೆ ಆರೋಪಿಯು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಹಲವಾರು ಪ್ರೊಫೈಲ್‌ಗಳನ್ನು ರಚಿಸಿದ್ದು, ದೇಶಾದ್ಯಂತ 100ಕ್ಕೂ ಹೆಚ್ಚು ಯುವತಿಯರನ್ನು ತನ್ನ ಬಲೆಗೆ ಬೀಳಿಸಿಕೊಂಡಿರುವುದು ಕಂಡುಬಂದಿದೆ.
ಆರೋಪಿ ಛತ್ತೀಸ್‌ಗಢದ ನಿವಾಸಿಯಾಗಿದ್ದು, ಪ್ರಸ್ತುತ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನೆಲೆಸಿದ್ದ. ಆತನ ಬಳಿಯಿದ್ದ ನಾಲ್ಕು ಸಿಮ್ ಕಾರ್ಡ್‌ಗಳು, ಒಂದು ಬಿಎಂಡಬ್ಲ್ಯು ಕಾರು, ಒಂಬತ್ತು ಎಟಿಎಂ ಕಾರ್ಡ್‌ಗಳು ಮತ್ತು ಐಷಾರಾಮಿ ವಾಚ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ತನಗೆ 2015ರಲ್ಲಿ ಮದುವೆಯಾಗಿದ್ದು, ಮೂರು ವರ್ಷದ ಮಗಳಿದ್ದಾಳೆ ಎಂದು ಬಹಿರಂಗಪಡಿಸಿದ್ದಾನೆ. 12ನೇ ತರಗತಿವರೆಗೆ ಮಾತ್ರ ಓದಿದ್ದ ಈತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.