ಯುಕೆಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನನ್ನು ಪೋರ್ಚುಗಲ್ನಲ್ಲಿ ಪೊಲೀಸರು “ಟೈಮ್ ಲಿಮಿಟ್” ಮುಗಿದಿದೆ ಎಂದು ಕಸ್ಟಡಿಯಿಂದ ಬಿಡುಗಡೆ ಮಾಡಿರುವ ಪ್ರಸಂಗ ನಡೆದಿದೆ.
ಮೂವತ್ತು ವರ್ಷದ ಅಲೆಕ್ಸ್ ಮಾಲೆ ಇಂಗ್ಲೆಂಡ್ನ ಸೌತ್ ವೆಸ್ಟ್ನಲ್ಲಿ ಅತ್ಯಾಧುನಿಕ ಎನ್ಕ್ರಿಪ್ಟ್ ಮಾಡಿದ ಸಂವಹನ ಜಾಲ ಬಳಸಿಕೊಂಡು ಎ ವರ್ಗದ ಡ್ರಗ್ಸ್ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದ.
ಅವ್ಯಾಹತವಾಗಿ ಮಾದಕ ದ್ರವ್ಯಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾತನನ್ನು ಮೇ 2022 ರಲ್ಲಿ ಟರ್ಕಿಯಿಂದ ವಿಮಾನದಲ್ಲಿ ಪೋರ್ಚುಗಲ್ನ ಲಿಸ್ಬನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಬಂಧಿಸಲಾಯಿತು. ಮೂರು ತಿಂಗಳ ಹಿಂದೆ ಅವರನ್ನು ಯುಕೆ ರಾಷ್ಟ್ರೀಯ ಅಪರಾಧ ಏಜೆನ್ಸಿಯ (ಎನ್ಸಿಎ) ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಇದೀಗ ಸಮಯ ಮಿತಿ ಮುಗಿದಿದೆ ಎಂದು ಪೋರ್ಚುಗೀಸ್ ಪೊಲೀಸರು ಅತನನ್ನು ಬಿಡುಗಡೆ ಮಾಡಿದ್ದಾರೆ ಎಂದು ಎನ್ ಸಿ ಎ ಈಗ ಘೋಷಿಸಿದೆ.
ಆತ 2020ರಿಂದ ಯುಕೆಯಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ, ಅಂದಿನಿಂದ ಆತ ಸ್ಪೇನ್ನ ಮಾರ್ಬೆಲ್ಲಾ ಪ್ರದೇಶದಲ್ಲಿದ್ದ ಎಂದು ನಂಬಲಾಗಿತ್ತು. ಪೋರ್ಚುಗಲ್ನ ಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹಾಕಿ, “ದೇಶದಲ್ಲಿ ಆತನ ಪಾಲನೆ ಅವಧಿ ಮುಗಿದ ನಂತರ ಅಲೆಕ್ಸ್ ಮಾಲೆ ಬಿಡುಗಡೆಗೆ ಅಧಿಕಾರ ನೀಡಲಾಗಿದೆ” ಎಂದು ಎನ್ ಸಿ ಎ ವಕ್ತಾರರು ಬಹಿರಂಗಪಡಿಸಿದರು. ಯುಕೆ ಮತ್ತು ಪೋರ್ಚುಗಲ್ ನಡುವೆ ಈ ವಿಷಯದಲ್ಲಿ ಚರ್ಚೆ ನಡೆಯುತ್ತಿದೆ.