ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಹೆಚ್ಚು ಹೆಚ್ಚು ಬಾರಿ ಬಂದರೆ ಮತ ಬೀಳುತ್ತೆ ಎಂಬ ಭ್ರಮೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಆದರೆ ಮೋದಿ ಎಷ್ಟೇ ಬಾರಿ ಬಂದು ಭಾಷಣ, ರೋಡ್ ಶೋ ಮಾಡಿ ಹೋದರೂ ಸಹ ಜನರು ಬಿಜೆಪಿಯನ್ನು ಸೋಲಿಸಬೇಕೆಂಬ ತಮ್ಮ ನಿರ್ಧಾರ ಬದಲಾಯಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ.
ಮೋದಿ ಸೇರಿದಂತೆ ಬಿಜೆಪಿ ನಾಯಕರು ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸುಳ್ಳು ಹೇಳುವುದನ್ನೇ ಪ್ರಚಾರ ಎಂದು ಅವರು ಭಾವಿಸಿದ್ದಾರೆ. ಆದರೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಇದಕ್ಕೆ ಮನ್ನಣೆ ನೀಡುವುದಿಲ್ಲ. ಬಿಜೆಪಿಯ ಭ್ರಷ್ಟಾಚಾರದಿಂದ ಬೇಸತ್ತಿರುವ ಜನ ಅವರನ್ನು ಮನೆಗೆ ಕಳುಹಿಸಲು ಕಾಯುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ವರ್ಗದ ಜನ ಆತಂಕದಿಂದಲೇ ಬದುಕುವಂತಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ ಎಂದು ಹೇಳಿದ ಸಿದ್ದರಾಮಯ್ಯ, ಅತಂತ್ರ ಸ್ಥಿತಿ ಬರುವುದಿಲ್ಲ, ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.