ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಇದೇ ವೇಳೆ ವಿಶ್ವದ ಅತೀ ಎತ್ತರದ ಪ್ರಗತಿ ಪ್ರತಿಮೆ ಹೆಸರಿನಲ್ಲಿ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡ ಅವರ 108 ಅಡಿಯ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡ ಅವರು ತೊಡುತ್ತಿದ್ದ ಶೈಲಿಯ ಪೇಟಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತೊಡಿಸಿದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮೋದಿ ಅವರಿಗೆ ಕೆಂಪೇಗೌಡ ಅವರ ಪ್ರತಿಕೃತಿಯ ಸ್ಮರಣಿಕೆ ನೀಡಿದರು.
ಇನ್ನು ಮೋದಿಯವರಿಗೆ ನೀಡಿದ ಪೇಟಾ ವಿಶೇಷವಾಗಿದೆ. ಮೈಸೂರಿನ ನಂದನ್ ಎನ್ನುವ ಕಲಾವಿದ ಈ ಪೇಟಾ ತಯಾರು ಮಾಡಿದ್ದಾರೆ. ಈ ಪೇಟಾವನ್ನು ತಯಾರಿಸಲು ಸುಮಾರು ಹತ್ತು ದಿನಗಳ ಕಾಲ ಸಮಯ ತೆಗೆದುಕೊಂಡಿದ್ದಾರಂತೆ. ಕೆಂಪು ಬಣ್ಣದ ಅಪ್ಪಟ ಬನಾರಸ್ ರೇಷ್ಮೆ ಬಳಸಿ ಪೇಟಾವನ್ನು ತಯಾರಿಸಲಾಗಿದೆ. ಬಿಳಿ ಗರಿ, ಮುತ್ತುಗಳನ್ನು ಸೇರಿಸಿ ಸೂಕ್ಷ್ಮ ಕುಸುರಿ ಕೆಲಸ ಮಾಡಲಾಗಿದೆ.