alex Certify ಮೋದಿಯವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ ? ಸಿದ್ದರಾಮಯ್ಯ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿಯವರೇ ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ ? ಸಿದ್ದರಾಮಯ್ಯ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ  ಪ್ರವಾಸದಲ್ಲಿದ್ದು, ಇದರ ನಡುವೆ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ ನದ್ದು, ಬಂದರು, ಏರ್ ಪೋರ್ಟ್ ನುಂಗಿದ್ದ ಅದಾನಿ ಗುಜರಾತ್ ನವರು, ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಗುಜರಾತ್ ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಈ ಗುಜರಾತಿ ಆಕ್ರಮಣ ಇನ್ನು ಸಹಿಸಲು ಸಾಧ್ಯ ಇಲ್ಲ. ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಗೌರವಪೂರ್ವಕವಾಗಿ ನಿಲ್ಲಿಸಿ. ಕನ್ನಡಿಗರ ನಾಡಪ್ರೇಮ, ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ, ಪರಿಣಾಮ ನೆಟ್ಟಗಾಗದು..! ಎಂದು ಗುಡುಗಿದ್ದಾರೆ.

ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಅಮುಲ್ ಜೊತೆ ಕೆಎಂಎಫ್ ವಿಲೀನದ ಪ್ರಸ್ತಾವ ಮಾಡಿದ ದಿನದಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಪ್ರಹಾರ ಶುರುವಾಗಿದೆ, ಏನಿದು ನಿಮ್ಮ ಕರಾಮತ್ತು?
ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಿಂದ ನಂದಿನಿ ಹಾಲು ಮತ್ತಿತರ ಉತ್ಪನ್ನಗಳು ಮಾಯವಾಗುತ್ತಿವೆ. ಗುಜರಾತ್ ನಿಂದ ನೀವು ಕಳುಹಿಸುತ್ತಿರುವ ಅಮುಲ್ ಹಾಲು ಮತ್ತು ಉತ್ಪನ್ನಗಳ ಮಾರಾಟದ ಬಿರುಸು ಹೆಚ್ಚಾಗಿದೆ. ಇವೆಲ್ಲವೂ ಸಹಜ ಬೆಳವಣಿಗೆಯೇ? ಭರವಸೆ ನೀಡಿದಂತೆ ಯುವಜನರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡಲಿಲ್ಲ, ಬದಲಿಗೆ ನಮ್ಮ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳಲ್ಲಿನ ಕನ್ನಡಿಗರ ಉದ್ಯೋಗಗಳನ್ನು ಕಿತ್ತುಕೊಂಡಾಯಿತು. ಈಗ ರೈತರ ಹೊಟ್ಟೆಗೆ ಹೊಡೆಯುವ ಹುನ್ನಾರವೇ? ಎಂದು ಕೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಕ್ಷೀರಧಾರೆ ಮತ್ತು ಕ್ಷೀರಭಾಗ್ಯ ಯೋಜನೆಗಳು ಅನ್ನಭಾಗ್ಯ ಯೋಜನೆಯ ರೀತಿಯಲ್ಲಿಯೇ ನನಗೆ ಸಂತೃಪ್ತಿ ತಂದ ಯೋಜನೆಗಳು. ಗೋಭಕ್ತಿ ಎಂದರೆ ಗೋಮಾಂಸ ಮಾರಾಟಕ್ಕೆ ಲೈಸೆನ್ಸ್ ಕೊಡುವುದೇ ಮೋದಿ ಜೀ? ಎಂದು ವ್ಯಂಗ್ಯವಾಡಿದ್ದಾರೆ.

ಹಾಲಿನ ಸಬ್ಸಿಡಿಯನ್ನು ಲೀಟರಿಗೆ 5 ರೂ.ಹೆಚ್ಚಿಸಿ ನಾನು ಕ್ಷೀರಧಾರೆ ಯೋಜನೆ ಜಾರಿಗೊಳಿಸಿದ್ದೆ. ಇದರಿಂದಾಗಿ 20-12-2013 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017 ರ ವೇಳೆಗೆ 73 ಲಕ್ಷ ಲೀಟರಿಗೆ ಏರಿಕೆಯಾಗಿತ್ತು. ಹಾಲು ಹೆಚ್ಚಾಯಿತು ಎಂದು ನಾವು ಖರೀದಿ ಕಡಿಮೆ ಮಾಡಿರಲಿಲ್ಲ. ಹೆಚ್ಚುವರಿ ಹಾಲನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಇದು ಗೋಸಂಪತ್ತು, ರೈತ ಸಂಪತ್ತು ಮತ್ತು ಮಕ್ಕಳ ಸಂಪತ್ತು ಬೆಳೆಸಿದ ನಮ್ಮ ಆಡಳಿತಶೈಲಿ. ನಿಮ್ಮದೇನು?

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. 99 ಲಕ್ಷ ಲೀಟರ್ ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಇದು ನೀವು ಮತ್ತು ಅಮಿತ್ ಶಾ ಕೂಡಿ ಕೆಎಂಎಫ್ ವಿರುದ್ಧ ಮಾಡಿರುವ ಷಡ್ಯಂತ್ರವೇ?

ಕೆಎಂಎಫ್ ಹಾಲು ಖರೀದಿಸುತ್ತಿಲ್ಲ ಎಂದು ಹಳ್ಳಿಗಳಲ್ಲಿ ಪಶುಪಾಲಕರು ಗೋಳಾಡುತ್ತಿದ್ದಾರೆ. ಹಾಲು ಸಂಗ್ರಹದ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದಾಗಿ ಪ್ರತಿದಿನ ಸುಮಾರು 11 ಕೋಟಿ ರೂಪಾಯಿ ಹಣ ರೈತರ ಕೈತಪ್ಪಿ ಹೋಗುತ್ತಿದೆ. ಇದೇನಾ ನಿಮ್ಮ ರೈತರ ಆದಾಯ ದುಪ್ಟಟ್ಟುಗೊಳಿಸುವ ಯೋಜನೆ?

ಗುಜರಾತ್ ರಾಜ್ಯದ ಅಮುಲ್ ಪ್ರವೇಶದಿಂದ ನಂದಿನಿಯ ಬೇಡಿಕೆ ಇನ್ನಷ್ಟು ಕುಸಿದು ಕೆಎಂಎಫ್ ಹಾಲಿನ ಸಂಗ್ರಹ ಕಡಿಮೆಯಾಗಲಿದೆ. ಗ್ರಾಮೀಣ ಭಾಗದಲ್ಲಿ ಕೃಷಿಕರ ಪ್ರಮುಖ ಆದಾಯದ ಮೂಲವಾದ ಹೈನುಗಾರಿಕೆಗೆ ಯಾಕೆ ಕಲ್ಲು ಹಾಕುತ್ತಿದ್ದೀರಾ?

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಬರ್ವಾಲ್‌ಗಳು, ಬಿಂದ್ರಾಗಳು, ಜೈನ್‌ಗಳು, ಶರ್ಮಾಗಳ ಬೀಫ್ ರಫ್ತು ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿರುವುದಾಗಿ ವರದಿಗಳಿವೆ. ಇವರ ಮೇಲಿರುವ ಕೃಪಾಕಟಾಕ್ಷ ಯಾರದ್ದು?

ನಮ್ಮ ಸರ್ಕಾರ ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಬ್ಸಿಡಿ ರೂಪದಲ್ಲಿ ರೈತರಿಗೆ ಕೊಟ್ಟಿತ್ತು. ಆದರೆ ಬಿಜೆಪಿ ಸರ್ಕಾರ 2020 -21 ರಲ್ಲಿ 1,186 ಕೋಟಿ ಖರ್ಚು ಮಾಡಿದ್ದರೆ 2023-24ಕ್ಕೆ ಕೇವಲ 1,200 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಒದಗಿಸಿ ಅನ್ಯಾಯ ಮಾಡಿದೆ.

ಕಳೆದ 5 ವರ್ಷಗಳಲ್ಲಿ ಪಶು ಆಹಾರದ ಬೆಲೆಗಳು ಮೂರು ಪಟ್ಟು ಹೆಚ್ಚಾಗಿವೆ. 2017-18ರಲ್ಲಿ 49 ಕೆ.ಜಿ ಬೂಸಾದ ಬೆಲೆ 450 ರೂ. ಇದ್ದದ್ದು ಈಗ 1,350 ರೂ.ಗಳಿಗೆ ಏರಿಕೆಯಾಗಿದೆ. 30 ಕೆಜಿ ಹಿಂಡಿಯ ಬೆಲೆ 400 ರೂ.ಗಳಿಂದ 1,500 ಕ್ಕೇ ಏರಿದೆ. ಏನಿದು?

ರಾಜ್ಯದ ಬಿಜೆಪಿ ಸರ್ಕಾರ ಸರ್ಕಾರಿ ಕಾವಲು ಜಮೀನುಗಳನ್ನು, ಡಿನೋಟಿಫೈ ಮಾಡಿ ಉಳ್ಳವರಿಗೆ, ಆರ್‌ಎಸ್‌ಎಸ್ ನವರಿಗೆ, ಬಂಡವಾಳಿಗರಿಗೆ ಹಂಚಲು ಪ್ರಾರಂಭಿಸಿದೆ. ಟಿಪ್ಪುಸುಲ್ತಾನನ ದೂರದೃಷ್ಟಿಯ ಫಲವಾದ ಲಕ್ಷಾಂತರ ಎಕರೆ ವಿಸ್ತೀರ್ಣದ ಅಮೃತ್ ಮಹಲ್ ಕಾವಲು ಪ್ರದೇಶ ಮಾಯವಾಗುತ್ತಿರುವುದು ಯಾರಿಂದ?

ಆರ್‌ಎಸ್‌ಎಸ್ ಗೆ ಸರ್ಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡಲಾಗುತ್ತಿದೆ. ನಮ್ಮ ರೈತರ ಜಾನುವಾರುಗಳಿಗೆ ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

— Siddaramaiah (@siddaramaiah) April 9, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...