ಸೆಪ್ಟೆಂಬರ್ 17ರ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಏಳು ದಶಕಗಳಿಂದ ಭಾರತದಲ್ಲಿ ಕಣ್ಮರೆಯಾಗಿದ್ದ ಚೀತಾಗಳನ್ನು ಮರು ಪರಿಚಯಿಸಿದ್ದಾರೆ. ನಮೀಬೀಯಾದಿಂದ ಭಾರತಕ್ಕೆ ತಂದಿದ್ದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ – ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ 8 ಚೀತಾಗಳು ಬಂದವು. ಆದರೆ ಈ ಎಂಟು ವರ್ಷಗಳಲ್ಲಿ ನೀವು ನೀಡಿದ ಭರವಸೆಯಂತೆ 16 ಕೋಟಿ ಉದ್ಯೋಗಗಳು ಏಕೆ ಬರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿಯವರ ಜನ್ಮದಿನದಂದು ಯುವ ಜನತೆ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಸೃಷ್ಟಿಸುವ ಭರವಸೆ ನೀಡಿದ್ದು, ಹೀಗಾಗಿ ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗ ಎಲ್ಲಿ ಎಂಬ ಪ್ರಶ್ನೆಯನ್ನು ರಾಹುಲ್ ಗಾಂಧಿ ಕೇಳಿದ್ದಾರೆ.