ಪ್ರಧಾನಿ ನರೇಂದ್ರ ಮೋದಿಯವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮದಿನದಂದು ಗಣ್ಯರಿಂದ ಹಿಡಿದು ಶ್ರೀಸಾಮಾನ್ಯರವರೆಗೆ ಎಲ್ಲರಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಇದರ ಮಧ್ಯೆ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಅಂದರೆ ಶುಕ್ರವಾರ ಉಜ್ಬೇಕಿಸ್ತಾನದ ಸಮರ್ ಕಂಡ್ ನಡೆದ ಎಸ್ ಸಿ ಓ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ತಮ್ಮ ಆತ್ಮೀಯ ಮಿತ್ರನಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಕ್ರೇನ್ ಜೊತೆಗಿನ ರಷ್ಯಾ ಯುದ್ಧವನ್ನು ಪ್ರಸ್ತಾಪಿಸಿದ ಅವರು, ಇದು ಯುದ್ಧದ ಯುಗವಲ್ಲ ಎಂದು ಹೇಳಿದ್ದಾರೆ.
ಇದೀಗ ಈ ಮಾತುಕತೆಯ ಸಂದರ್ಭದಲ್ಲಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಮುಂಚಿತವಾಗಿ ಕೋರಲಾರೆ ಎಂದು ಹೇಳಿದ ಪುಟಿನ್ ಇದು ರಷ್ಯಾದ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಹಾಗಾಗಿ ಭಾರತ ಹಾಗೂ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಮೂಲಗಳ ಪ್ರಕಾರ ಯಾವುದೇ ವ್ಯಕ್ತಿಯ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಶುಭಕೋರುವ ಸಂಪ್ರದಾಯ ರಷ್ಯಾದಲ್ಲಿ ಇಲ್ಲವೆಂದು ಹೇಳಲಾಗಿದೆ. ಹುಟ್ಟುಹಬ್ಬದ ದಿನದಂದು ಮಾತ್ರ ಶುಭ ಕೋರಲಾಗುತ್ತದೆ. ಹೀಗಾಗಿ ತಮ್ಮ ಆತ್ಮೀಯ ಮಿತ್ರ ನರೇಂದ್ರ ಮೋದಿಯವರಿಗೆ ಶುಭವಾಗಲಿ ಎಂದಷ್ಟೇ ಪುಟಿನ್ ಹೇಳಿದ್ದಾರೆ.