ಭಾನುವಾರದಂದು 12 ರಾಜ್ಯಗಳಿಗೆ ಹೊಸ ರಾಜ್ಯಪಾಲರುಗಳನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಸಹ ಒಬ್ಬರು. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಈ ನೇಮಕಾತಿ ಆದೇಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದು, ಅದಾನಿಗಾಗಿ ಮೋದಿಯವರು ಕೆಲಸ ಮಾಡುತ್ತಾರೆ. ಮೋದಿಯವರಿಗೆ ಕೆಲಸ ಮಾಡಿದವರೆಲ್ಲ ಈಗ ರಾಜ್ಯಪಾಲರಾಗಿದ್ದು, ಹಾಗಾದರೆ ಜನರಿಗಾಗಿ ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಅಂದಹಾಗೆ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ತ್ರಿವಳಿ ತಲಾಕ್ ರದ್ದತಿ, ಅಯೋಧ್ಯೆ ರಾಮ ಜನ್ಮಭೂಮಿ ವಿವಾದ, ನೋಟು ಅಮಾನ್ಯೀಕರಣ ಎತ್ತಿ ಹಿಡಿದ ತೀರ್ಪು, ಖಾಸಗೀತನ ಮೂಲಭೂತ ಹಕ್ಕು ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ ನ್ಯಾಯಪೀಠದಲ್ಲಿ ಭಾಗವಾಗಿದ್ದರು.