ಅಮೆರಿಕಾದಲ್ಲಿ ಬಲು ಅಪರೂಪವಾದ ಮೊಸಳೆ ರೀತಿಯ ಜೀವಿ ಪತ್ತೆಯಾಗಿದೆ. ಮೀನುಗಾರರಾದ ಜಸ್ಟಿನ್ ಜೋರ್ಡಾನ್ ಮತ್ತು ಟೆರೆಲ್ ಮ್ಯಾಗೈರ್ ಅವರು ಇತ್ತೀಚೆಗೆ ಆಗ್ನೇಯ ಟೆಕ್ಸಾಸ್‌ನಲ್ಲಿ ಅಪರೂಪವಾಗಿ ಕಂಡುಬರುವ ಕಪ್ಪು ಬಣ್ಣದ ರಿವರ್ ಬೀಸ್ಟ್ ಅನ್ನು ಪತ್ತೆ ಹಚ್ಚಿದ್ದಾರೆ.
ಈ ಜೀವಿಯು ಅತ್ಯಂತ ಅಪರೂಪದ ಮೆಲನಿಸ್ಟಿಕ್ ಅಲಿಗೇಟರ್ ಗಾರ್ ಎಂದು ಜೋರ್ಡಾನ್ ತಿಳಿಸಿದ್ದಾರೆ. ಮೀನು ಸುಮಾರು 5 ಅಡಿ ಉದ್ದವಿದೆ ಎಂದು ಅವರು ಹೇಳಿದ್ದಾರೆ. ಈ ಜಾತಿಯ ಮೀನುಗಳು ಮತ್ತಷ್ಟು ಉದ್ದ ಬೆಳೆಯುತ್ತವೆ.
ಜೋರ್ಡಾನ್ ಹಲವಾರು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದು ಬ್ಲ್ಯಾಕ್ ರಿವರ್ ಬೀಸ್ಟ್ ನೀರಿನಲ್ಲಿ ಸುತ್ತಾಡುತ್ತಿರುವುದನ್ನು ತೋರಿಸುತ್ತದೆ.
ಈ ಜೀವಿಯು ಮೊಸಳೆಯಂತೆ ತನ್ನ ಬಾಯಿಯನ್ನು ಭಯಾನಕವಾಗಿ ತೆರಿದಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಈ ಫೋಟೋ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ಕೆಲವರು ಇದನ್ನು ಭಯಾನಕ ಎಂದು ಕರೆದ್ರೆ, ಇತರರು ಇದನ್ನು ಅನ್ಯಲೋಕದ ಜೀವಿ ಎಂದು ವಿವರಿಸಿದ್ದಾರೆ.
ಅಲಿಗೇಟರ್ ಗಾರ್ ಎಂದೇ ಪ್ರಸಿದ್ಧಿ ಪಡೆದ ಈ ಜೀವಿಗಳು, ಮೀನು ಜಾತಿಗಳಲ್ಲಿ ದೊಡ್ಡದಾಗಿದೆ. ಇವುಗಳು ಉತ್ತರ ಮತ್ತು ಮಧ್ಯ ಅಮೆರಿಕಾದಲ್ಲಿ ಮಾತ್ರ ವಾಸಿಸುತ್ತವೆ. ದೈತ್ಯ ಮೀನುಗಳು ಅಪರೂಪವಾಗಿದ್ದು, ಅಳಿವಿನಂಚಿನಲ್ಲಿದೆ. ಸಾಮಾನ್ಯವಾಗಿ ಇವು ಗಾಢ ಹಸಿರು ಅಥವಾ ಆಲಿವ್ ಬಣ್ಣವನ್ನು ಹೊಂದಿರುತ್ತವೆ.
ಈ ರೀತಿಯ ಕಪ್ಪು ಬಣ್ಣಗಳು ಇನ್ನೂ ಅಪರೂಪ ಎನ್ನಲಾಗಿದೆ. ಈ ಕಪ್ಪು ಜಾತಿಯ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ಜಾತಿಯ ಜೀವಿಗಳು ಮನುಷ್ಯರಿಗೆ ನಿರುಪದ್ರವಿಯಾಗಿದೆ. ಈ ಜೀವಿಗಳು ಸಾಮಾನ್ಯವಾಗಿ ನದಿಗಳಲ್ಲಿ ವಾಸಿಸುತ್ತವೆ.