ಮೈನಡುಗಿಸುವಂಥ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊಸಳೆಗಳಿಂದಲೇ ತುಂಬಿದ್ದ ನದಿಯಲ್ಲಿ ಬಾಲಕನೊಬ್ಬ ಮುಳುಗುತ್ತಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ ಜೀವನ್ಮರಣ ಹೋರಾಟ ನಡೆಸ್ತಿರೋ ದೃಶ್ಯ ಎಂಥವರಲ್ಲೂ ಆತಂಕ ಹುಟ್ಟಿಸುವಂತಿದೆ.
ನೀರಿನ ಸೆಳೆತಕ್ಕೆ ಸಿಲುಕಿದ್ದ ಬಾಲಕ ಹೇಗಾದ್ರೂ ಬದುಕಿ ಬರಬೇಕೆಂಬ ಛಲದಲ್ಲಿ ತಾನು ತೇಲುತ್ತಲೇ ಇರುವಂತೆ ನೋಡಿಕೊಂಡಿದ್ದಾನೆ. ಅದೇ ಸಮಯದಲ್ಲಿ ಬೇಟೆಗಾಗಿ ಕಾದು ಕುಳಿತಿದ್ದ ಮೊಸಳೆಗಳು ಅವನನ್ನು ಸುತ್ತುವರಿದಿವೆ. ಮೊಸಳೆಗಳಿಂದ ತಪ್ಪಿಸಿಕೊಳ್ಳಲು ಬಾಲಕ ತೇಲುತ್ತ ತೇಲುತ್ತ ಮುಂದೆ ಬಂದಿದ್ದಾನೆ.
ಅದೃಷ್ಟವಶಾತ್ ರಕ್ಷಣಾ ತಂಡ ಸಮಯಕ್ಕೆ ಸರಿಯಾಗಿ ದೋಣಿಯಲ್ಲಿ ಸ್ಥಳಕ್ಕೆ ಬಂದಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಮೊಸಳೆಗಳ ಬಾಯಿಗೆ ಆಹಾರವಾಗುವುದರಲ್ಲಿದ್ದ ಬಾಲಕನನ್ನು ಕೂಡಲೇ ಎಳೆದುಕೊಂಡು ದೋಣಿಯಲ್ಲಿ ಕೂರಿಸಿಕೊಂಡಿದೆ.
ಈ ವೀಡಿಯೊ ಚಂಬಲ್ ನದಿಯಲ್ಲಿ ಸೆರೆಹಿಡಿದಿದ್ದು ಅಂತಾ ಹೇಳಲಾಗ್ತಿದೆ. ಯುಪಿ ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ಸಿನೆಮಾದಂತೆ ಕಾಣುವ ನೈಜ ದೃಶ್ಯವೆಂದು ಬಣ್ಣಿಸಿದ್ದಾರೆ. ರಕ್ಷಣಾಪಡೆಯ ಸಮಯೋಚಿತ ಕಾರ್ಯಾಚರಣೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.