ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ಸಂಜೆ ತೂಗು ಸೇತುವೆ ಕುಸಿತವಾದ ಪರಿಣಾಮ 130 ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಏಳು ತಿಂಗಳಿನಿಂದ ಬಂದ್ ಆಗಿದ್ದ ಈ ಸೇತುವೆ ನವೀಕರಣಗೊಂಡ ಬಳಿಕ ಐದು ದಿನಗಳ ಹಿಂದಷ್ಟೇ ಸಾರ್ವಜನಿಕ ಬಳಕೆಗೆ ಮುಕ್ತವಾಗಿದ್ದು, ಕುಸಿದು ಬಿದ್ದು ಈ ಘೋರ ದುರಂತ ಸಂಭವಿಸಿದೆ.
ಭಾನುವಾರ ರಜಾ ದಿನವಾಗಿದ್ದ ಕಾರಣ ಸೇತುವೆ ಮೇಲೆ ಅಗತ್ಯಕ್ಕಿಂತ ಹೆಚ್ಚು ಜನರಿದ್ದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಪುಂಡಾಟಿಕೆ ಮೆರೆದ ಕೆಲವು ಯುವಕರು ಸೇತುವೆಯನ್ನು ಜಗ್ಗಾಡುತ್ತಾ ಕುಣಿದು ಕುಪ್ಪಳಿಸಿದ್ದೂ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹಳೆ ವಿಡಿಯೋ ಒಂದು ವೈರಲ್ ಆಗಿದ್ದು, ಕರ್ನಾಟಕದ ತೂಗು ಸೇತುವೆಯೊಂದರ ಮೇಲೆ ಮಹಾರಾಷ್ಟ್ರದ ನೋಂದಣಿ ಇರುವ ಕಾರು ಸಾಗುತ್ತಿರುವುದು ಕಂಡು ಬಂದಿದೆ. ಸಾರ್ವಜನಿಕರು ಸಾಹಸ ಮಾಡಲು ಇಂತಹ ರಿಸ್ಕ್ ತೆಗೆದುಕೊಳ್ಳುವುದು ಏಕೆಂಬ ಪ್ರಶ್ನೆಯೂ ಸಹ ಈಗ ಮೂಡಿದೆ.