ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೊಬೈಲ್ ಫೋನ್ನ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬದ್ನಗರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
68 ವರ್ಷದ ಮೃತರನ್ನು ದಯಾರಾಮ್ ಬರೋದ್ ಎಂದು ಗುರುತಿಸಲಾಗಿದ್ದು, ಅವರ ಮುಖ ಮತ್ತು ದೇಹದ ಇತರ ಭಾಗಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಅವರ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ.
ದಯಾರಾಮ್ ಬರೋದ್ ತನ್ನ ಸ್ನೇಹಿತನೊಂದಿಗೆ ಕೆಲವು ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಅವರು ತನ್ನ ಸ್ನೇಹಿತನ ಫೋನ್ ಕರೆಗೆ ಉತ್ತರಿಸದಿದ್ದಾಗ ಅವರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ದೇಹದ ಬಳಿ ಮೊಬೈಲ್ ಫೋನ್ ತುಣುಕುಗಳೂ ಪತ್ತೆಯಾಗಿವೆ. ಮನೆಯಲ್ಲಿ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಪೊಲೀಸರಿಗೆ ಸಿಕ್ಕಿಲ್ಲ.
ವರದಿಗಳ ಪ್ರಕಾರ, ಮೃತ ವ್ಯಕ್ತಿ ತನ್ನ ಫೋನ್ ಚಾರ್ಜ್ ಆಗುತ್ತಿರುವಾಗ ಯಾರೊಂದಿಗೋ ಮಾತನಾಡುತ್ತಿದ್ದರು ಎನ್ನಲಾಗಿದೆ.
ಮೊಬೈಲ್ ಫೋನ್ ಬ್ಯಾಟರಿ ಸ್ಫೋಟದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಅವರ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ವಿಧಿವಿಜ್ಞಾನ ತಜ್ಞರು ಪರಿಶೀಲಿಸುತ್ತಿರುವುದಾಗಿ ಬಾದ್ನಗರ ಪೊಲೀಸ್ ಠಾಣೆ ಪ್ರಭಾರಿ ಮನೀಶ್ ಮಿಶ್ರಾ ಹೇಳಿದ್ದಾರೆ.
ಮನೆಯ ಸಮೀಪ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಯಿಂದ ಈ ಘಟನೆ ಸಂಭವಿಸಿದೆಯೇ ಎಂದು ತಿಳಿಯಲು ತಜ್ಞರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.