ಶಿವಮೊಗ್ಗ: ಮೊಬೈಲ್ ನಲ್ಲಿ ಮಾತನಾಡುತ್ತ ಬಸ್ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ಚಾಲಕನಿಗೆ 5000 ರೂಪಾಯಿ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಗಜಾನನ ಬಸ್ ಚಾಲಕ ಮನ್ಸೂರ್ ಅಲಿ ಎಂಬುವವರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಜೂನ್ 6ರಂದು ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತಾ ಬಸ್ ಚಲಾಯಿಸಿದ್ದರು. ಅದೇ ಬಸ್ ನಲ್ಲಿ ಸಂಚರಿಸಿದ್ದ ಪ್ರಯಾಣಿಕನೊಬ್ಬ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ, ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ವಾಟ್ಸಾಪ್ ಮಾಡಿದ್ದರು.
ವಿಡಿಯೋ ಆಧರಿಸಿ ಟ್ರಾಫಿಕ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಬಸ್ ಚಾಲಕನನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದು, ಚಾಲಕನಿಗೆ 5000 ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೇ ಪ್ರಯಾಣಿಕರ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.