ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಪರಾಭವ ಅನುಭವಿಸಿದ್ದು, ಚಾಮರಾಜನಗರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿ. ಸೋಮಣ್ಣ ಎರಡು ಕ್ಷೇತ್ರಗಳಲ್ಲೂ ಸೋಲನ್ನಪ್ಪಿದ್ದರು. ತಮಗೆ ಇಷ್ಟವಿಲ್ಲದಿದ್ದರೂ ಸಹ ಪಕ್ಷದ ವರಿಷ್ಠರ ಮಾತಿಗೆ ಮನ್ನಣೆ ನೀಡಿ ಸೋಮಣ್ಣ ಕಣಕ್ಕಿಳಿದಿದ್ದು, ಇದೀಗ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೆ ಪೂರಕವೆಂಬಂತೆ ತುಮಕೂರಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಸಂಸದ ಜಿ.ಎಸ್. ಬಸವರಾಜು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಇಲ್ಲಿಂದ ವಿ. ಸೋಮಣ್ಣ ಕಣಕ್ಕಿಳಿಯಲಿದ್ದು, ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಿ. ಅವರ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದ್ದರು. ಇದೀಗ ಇದಕ್ಕೆ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ನಾನು ಹೋಗುವುದಿಲ್ಲ. ಲೋಕಸಭಾ ಚುನಾವಣೆಯ ಆಕಾಂಕ್ಷಿಯೂ ನಾನಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದು ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದು, ಬಸವರಾಜು ಅವರು ಹಿರಿಯರಾಗಿದ್ದು, ನನ್ನ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ಅವರಿಗೆ ಋಣಿಯಾಗಿದ್ದೇನೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.