ಮೊದಲ ಮಳೆಗೆ ನೆನೆಯುವ ಬಯಕೆ ಎಲ್ಲರಿಗೂ ಇದ್ದದ್ದೇ. ಮಕ್ಕಳಿಗೆ ಅದು ಖುಷಿಕೊಟ್ಟರೆ ದೊಡ್ಡವರಿಗೆ ಅದು ಮತ್ತೆ ಬಾಲ್ಯವನ್ನು ನೆನಪಿಸುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ್ದು ಕೂದಲಿನ ಬಗ್ಗೆ.
ಇಂದಿನ ಮಳೆನೀರು ನೀವು ಬಾಲ್ಯದಲ್ಲಿ ಆಡಿದಷ್ಟು ಸ್ವಚ್ಛವಾದ ನೀರಲ್ಲ ಎಂಬುದು ನಿಮಗೆ ನೆನಪಿರಲಿ. ವಾಯುಮಾಲಿನ್ಯದಿಂದಾಗಿ ನೀರು ಅಷ್ಟಾಗಿ ಶುದ್ಧವಿಲ್ಲ. ಈ ನೀರಿನಲ್ಲಿ ರಾಸಾಯನಿಕಗಳು ಅಡಕವಾಗಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
ಹಿಂದೆ ಮಳೆನೀರು ತೀರ್ಥ ಎಂಬಂತಿದ್ದ ಕಾಲ ಈಗ ಸಂಪೂರ್ಣ ಬದಲಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೆ ನೀರು ನಿಮ್ಮ ತಲೆ ಕೂದಲಿಗೆ ಬೀಳದಂತೆ ನೋಡಿಕೊಳ್ಳಿ. ನಿಮ್ಮ ಕೂದಲಿನ ಸೌಂದರ್ಯವನ್ನು ಹಾಳು ಮಾಡುವುದರ ಜೊತೆ ಇದು ಬೇರುಗಳ ದೃಢತೆಯನ್ನೂ ಅಲ್ಲಾಡಿಸಿ ಬಿಡುತ್ತದೆ.
ಮಳೆಯಲ್ಲಿ ನೆನೆದ ಬಳಿಕ ನೆತ್ತಿಯ ಭಾಗ ಒಣಗಿದಂತೆ ಭಾಸವಾಗಬಹುದು. ಇದಕ್ಕೆ ಮುಖ್ಯ ಕಾರಣ ಅಲ್ಲಿ ನೈಸರ್ಗಿಕ ಎಣ್ಣೆಯಂಶ ಇಲ್ಲದಿರುವುದು. ಹಿಂದಿನವರು ನೆತ್ತಿಗೆ ಎಣ್ಣೆ ಇಡು ಎಂದು ಹೇಳುತ್ತಿದ್ದುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಆ ಭಾಗದಲ್ಲಿ ಸಾಕಷ್ಟು ಎಣ್ಣೆಯಂಶ ಇದ್ದರೆ ತಲೆಕೂದಲಿನ ಯಾವ ಸಮಸ್ಯೆಯೂ ನಿಮಗೆ ಕಾಣಿಸಿಕೊಳ್ಳದು.