ಲಖನೌ: ಮೊದಲ ಬಾರಿಗೆ ಪ್ರಯಾಣಿಸುವ ವೃದ್ಧ ದಂಪತಿಗೆ ವಿಮಾನ ಹತ್ತಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಿದರು ಎಂಬ ಬಗ್ಗೆ ಲಿಂಕ್ಡ್ಇನ್ನಲ್ಲಿ ಶೇರ್ ಮಾಡಲಾದ ಪೋಸ್ಟ್ ಒಂದು ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ಲಿಂಕ್ಡ್‌ಇನ್ ಬಳಕೆದಾರ ಅಮಿತಾಭ್ ಷಾ ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಬೋರ್ಡಿಂಗ್ ಏರಿಯಾದಲ್ಲಿ ವಯಸ್ಸಾದ ದಂಪತಿಯನ್ನು ಕಂಡರು. ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಲು ಉತ್ತರ ಪ್ರದೇಶದ ದೂರದ ಹಳ್ಳಿಯಿಂದ ಎಂಟು ಗಂಟೆಗಳ ಕಾಲ ಬಸ್‌ನಲ್ಲಿ ಪ್ರಯಾಣಿಸಿದಾಗ ಇಬ್ಬರೂ ಸುಸ್ತಾಗಿದ್ದರು.
ಈ ಸಂದರ್ಭದಲ್ಲಿ ಷಾ ಅವರು ವೃದ್ಧ ದಂಪತಿ ಬಳಿಗೆ ನಡೆದು ವಿಮಾನವನ್ನು ಹತ್ತಲು ಸಹಾಯ ಮಾಡಿದರು. “ನಾನು ಅವರನ್ನು ಬೋರ್ಡಿಂಗ್ ಏರಿಯಾದಲ್ಲಿ ಸಂಪೂರ್ಣ ಸುಸ್ತಾದ ಸ್ಥಿತಿಯಲ್ಲಿ ನೋಡಿದ್ದೆ. ಅವರು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಹೋಗುತ್ತಿದ್ದರು. ಅವರಿಗೆ ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲ. ನಾನು ನಗುತ್ತಾ ಅವರ ಬಳಿಗೆ ನಡೆದು ನನ್ನನ್ನು ಅನುಸರಿಸಲು ಕೇಳಿದೆ. ನಂತರ ಅವರಿಗೆ ಆಹಾರವನ್ನು ತಂದು ಕೊಟ್ಟೆ” ಎಂದು ಅಮಿತಾಬ್ ಷಾ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
‘ವಿಮಾನದೊಳಗೆ, ಅವರು ನನ್ನ ಮುಂದೆಯೇ ಕುಳಿತಿದ್ದರು. ನಂತರ ನಾವು ವಿಮಾನದಲ್ಲಿ ಸುರಕ್ಷಿತವಾಗಿದ್ದೇವೆ ಎಂದು ನನ್ನ ಮಗಳಿಗೆ ಹೇಳಲು ಒಂದು ಫೋಟೋ ತೆಗೆದು ವಾಟ್ಸ್ಆ್ಯಪ್ನಲ್ಲಿ ಕಳುಹಿಸಬಹುದೆ ಎಂದು ಮಹಿಳೆ ಕೇಳಿದರು. ನಾನು ಫೋಟೋ ತೆಗೆದು ಕಳಿಸಿದಾಗ ಅವರಲ್ಲಿ ಧನ್ಯತಾ ಭಾವ ಇತ್ತು’ ಎಂದು ಅವರು ಬರೆದುಕೊಂಡಿದ್ದಾರೆ.
ಈ ರೀತಿ ವೃದ್ಧ ದಂಪತಿಗೆ ಸಹಾಯ ಮಾಡಿದ ವ್ಯಕ್ತಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.