ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತನ್ನ ಅಟ್ಟಹಾಸ ಮೆರೆದಿದ್ದು ಸಹಸ್ರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ದಿನನಿತ್ಯ ಪ್ರತಿ ಜಿಲ್ಲೆಯಲ್ಲೂ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗಿದ್ದು, ಸೋಂಕು ಹಾಗೂ ಸಾವಿನ ಸಂಖ್ಯೆ ಇಳಿಮುಖವಾಗಿದೆ.
ಕಳೆದ ಕೆಲವು ದಿನಗಳಿಂದ ಕೆಲ ಜಿಲ್ಲೆಗಳಲ್ಲಿ ಒಂದಂಕಿ ಎರಡಂಕಿ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಸಂಖ್ಯೆ ಸಹ ಇದೇ ರೀತಿ ಇತ್ತು. ಮಂಗಳವಾರದಂದು ರಾಜ್ಯದಲ್ಲಿ 1913 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು 48 ಮಂದಿ ಮೃತಪಟ್ಟಿದ್ದಾರೆ.
ವಿಶೇಷವೆಂದರೆ ಮಂಗಳವಾರದಂದು ಯಾದಗಿರಿ ಜಿಲ್ಲೆಯಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ವರದಿಯಾಗಿಲ್ಲ. ಅಲ್ಲದೆ ಯಾವುದೇ ಸಾವು ಕೂಡ ಸಂಭವಿಸಿಲ್ಲ. ಈ ಮೂಲಕ ಯಾದಗಿರಿ ಮಂಗಳವಾರದಂದು ಸೋಂಕು ರಹಿತ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದೆ.