ಲವ್ ಅಟ್ ಫಸ್ಟ್ ಸೈಟ್ (ಮೊದಲ ನೋಟದಲ್ಲೇ ಪ್ರೀತಿ) ಅನ್ನೋ ಮಾತೊಂದಿದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾರ ಮೇಲಾದ್ರೂ ಪ್ರೀತಿ ಹುಟ್ಟಿರಲೇಬಹುದು. ನೀವು ಮೊದಲ ಬಾರಿಗೆ ಯಾರನ್ನಾದರೂ ಪ್ರೀತಿಸಿದ್ದು ನೆನಪಿದೆಯೇ ? ನಿಮ್ಮ ಕ್ರಶ್ ಅನ್ನು ನೋಡಿದಾಗಲೆಲ್ಲಾ ಹೊಟ್ಟೆಯಲ್ಲಿ ಗುಳುಗುಳು ಎಂತೆನಿಸೋ ಭಾವನೆ ಉಂಟಾಗಿತ್ತಾ..? ಅಥವಾ ಯಾರಿಗೂ ಗೊತ್ತಾಗದ ರೀತಿ ನಿಮ್ಮ ಕ್ರಶ್ ಅನ್ನು ನೋಡಲೆಂದೇ ಅವರತ್ತ ತೆರಳುತ್ತಿದ್ರಾ..? ಇಷ್ಟೆಲ್ಲಾ ಯಾಕೆ ಪ್ರಶ್ನೆ ಕೇಳಿದ್ವಿ ಅಂತಾ ತಲೆಕೆಡಿಸ್ಕೋಬೇಡಿ ಈ ಸ್ಟೋರಿ ಓದಿ.
ಹೌದು, ಕಾಲೇಜು ದಿನಗಳಲ್ಲಿ ಹಲವಾರು ಮಂದಿ ತಮ್ಮ ಕ್ರಶ್ ನೋಡಲು ಕದ್ದು-ಮುಚ್ಚಿ ಹೋಗುವುದನ್ನು ನೀವು ನೋಡಿರಬಹುದು. ಹಾಗೆಯೇ ಶ್ವಾನವೊಂದು ಮನೆಯ ತಾರಸಿಗೆ ಬಂದು ಯಾರನ್ನೋ ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ, ಚಿನೋ ಎಂಬ ನಾಯಿಯು ತನ್ನ ಪಕ್ಕದ ಮನೆಯ ನಾಯಿಯನ್ನು ನೋಡುವುದಕ್ಕಾಗಿ ಟೆರೇಸ್ ಗೆ ಹೋಗಿದೆ. ಚಿನೋ ತಾರಸಿಯಲ್ಲಿ ನೆರೆಹೊರೆಯ ನಾಯಿಯತ್ತ ಇಣುಕಿ ನೋಡಿದ್ರೆ, ಅತ್ತ ಕರಿನಾಯಿ ಕೂಡ ಚಿನೋ ಶ್ವಾನದತ್ತ ದಿಟ್ಟಿಸಿದೆ. ಈ ವಿಡಿಯೋ ನೋಡ್ತಾ ಇದ್ರೆ, ಕಣ್ಣು ಕಣ್ಣು ಸೆಳೆತಾಗ…… ಎಂಬ ಹಾಡು ನೆನಪಾಗೋದಂತೂ ಸುಳ್ಳಲ್ಲ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳು ಕೂಡ ಮೋಹಿಸುತ್ತವೆ ಅನ್ನೋದಕ್ಕೆ ಸಾಕ್ಷಿ ಈ ವಿಡಿಯೋ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವಂತೂ ಹುಚ್ಚು ವೈರಲ್ ಆಗಿಬಿಟ್ಟಿದೆ. 8.3 ದಶಲಕ್ಷಕ್ಕೂ ಹೆಚ್ಚಿನ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರಂತೂ ಫಿದಾ ಆಗಿದ್ದಾರೆ.