ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಪುಟಾಣಿ ರೈಲು ಸಂಚಾರ ಆರಂಭಿಸಲಾಗಿದೆ. ಶನಿವಾರದಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಇದಕ್ಕೆ ಚಾಲನೆ ನೀಡಿದ್ದಾರೆ.
ಚಾಲನೆ ನೀಡಿದ ಬಳಿಕ ಈ ಗಣ್ಯರು ಪುಟಾಣಿ ರೈಲಿನಲ್ಲಿ ಪ್ರಯಾಣಿಸಲು ಮುಂದಾಗಿದ್ದು, ಆದರೆ 100 ಮೀಟರ್ ಚಲಿಸುತ್ತಿದ್ದಂತೆಯೇ ಈ ರೈಲು ಹಳಿ ತಪ್ಪಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ರೈಲು ಅತಿ ಕಡಿಮೆ ವೇಗದಲ್ಲಿ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಕೂಡಲೇ ಪುಟಾಣಿ ರೈಲಿನಿಂದ ಕೆಳಗಿಳಿದ ಗಣ್ಯರು ಅವಘಡವನ್ನು ವೀಕ್ಷಿಸಿ ಬಳಿಕ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.