ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಯೋಜನೆ ವಾಪಸ್ ಪಡೆಯದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಮಕ್ಕಳಲ್ಲಿ ಸಾಮರಸ್ಯ ಮೂಡಿಸಬೇಕಾದ ಸರ್ಕಾರವೇ ಮೊಟ್ಟೆ ಯೋಜನೆಯಂತಹ ಯೋಜನೆ ಜಾರಿಗೊಳಿಸುವ ಮೂಲಕ ವೈಮನಸ್ಸು ಮೂಡಿಸಲು ಕಾರಣವಾಗಿದೆ. ಹಿಂದಿನ ಹಲವು ಸರ್ಕಾರಗಳು ವಿವಾದಿತ ಯೋಜನೆಯನ್ನು ಕೈಬಿಟ್ಟಿವೆ. ಆದರೆ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಯೋಜನೆ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ.
ಏಕರೂಪತೆ ಬಗ್ಗೆ ಮಾತನಾಡುವ ಆರ್ ಎಸ್ ಎಸ್ ನಾಯಕರು ಈ ಬಗ್ಗೆ ಗಮನ ಕೊಡಬೇಕು. ಮೊಟ್ಟೆ ಯೋಜನೆ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಸ್ಯಹಾರಿ ಒಕ್ಕೂಟದ ಸಂತರು ಎಚ್ಚರಿಸಿದ್ದಾರೆ.
ಶಾಲೆಗಳಲ್ಲಿ ಪೌಷ್ಠಿಕ ಆಹಾರ ನೀಡಬೇಕು ಎನ್ನುವುದಾದರೆ ಮೊಟ್ಟೆಗಿಂತಲೂ ಉತ್ತಮ ಪೌಷ್ಠಿಕ ಆಹಾರ ಕೊಡಿ. ಒಂದು ವೇಳೆ ಮೊಟ್ಟೆಯನ್ನೇ ಕೊಡಬೇಕು ಎನ್ನುವುದಿದ್ದರೆ ಮನೆಗೆ ಕೊಡಿ ಹೊರತು ಶಾಲೆಯಲ್ಲಿ ಮೊಟ್ಟೆ ವಿತರಣೆ ಬೇಡ. ಸರ್ಕಾರದ ಈ ಯೋಜನೆಗೆ ವಿರೋಧವಿದೆ. ಇದು ಕೇವಲ ಲಿಂಗಾಯಿತ ಸ್ವಾಮೀಜಿಗಳ ಹೋರಾಟವಲ್ಲ. ಎಲ್ಲಾ ಧರ್ಮಗಳ ಸಸ್ಯಹಾರಿಗಳ ಹೋರಾಟ. ಡಿ.20ರಂದು ಬೆಳಗಾವಿಯಲ್ಲಿ ಸಂತ ಸಮಾವೇಶ ನಡೆಯಲಿದ್ದು, ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸಲಾಗುವುದು. ನಮ್ಮ ಹೋರಾಟ ಮಾಂಸಾಹಾರಿಗಳ ವಿರುದ್ಧವಲ್ಲ, ಶಾಲೆಗಳಲ್ಲಿ ಮೊಟ್ಟೆ ಯೋಜನೆ ಜಾರಿ ವಿರುದ್ಧ ಎಂಬ ಆಕ್ರೋಶ ವ್ಯಕ್ತವಾಗಿದೆ.