ಸುಂದರವಾದ ಕೂದಲು ಯಾರಿಗಿಷ್ಟವಿಲ್ಲ ಹೇಳಿ? ಕೂದಲು ನುಣುಪಾಗಿ ದಟ್ಟವಾಗಿ ಬೆಳೆಯಲು ಮೊಟ್ಟೆ ಮತ್ತು ಮೊಸರನ್ನು ಬಳಸಬೇಕು. ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ. ಕೂದಲ ದೃಢತೆ ಮತ್ತು ಸೌಂದರ್ಯಕ್ಕಾಗಿ ದುಬಾರಿ ಬೆಲೆಯ ಹೇರ್ ಕೇರ್ ಉತ್ಪನ್ನಗಳನ್ನು ಬಳಸಬೇಡಿ.
ಮೊಟ್ಟೆ, ಮೊಸರಿನ ಮಿಶ್ರಣವನ್ನು ಪ್ರಯತ್ನಿಸಿ. ಮೊಸರು ನಿಮ್ಮ ಕೂದಲಿಗೆ ಕಂಡಿಷನರ್ ಇದ್ದಂತೆ. ಕೂದಲನ್ನು ಮೃದುಗೊಳಿಸುವುದರ ಜೊತೆಗೆ ಅವುಗಳನ್ನು ಆರೋಗ್ಯಕರವಾಗಿಡುತ್ತದೆ. ತಲೆಹೊಟ್ಟನ್ನು ಕೂಡ ನಿವಾರಿಸುತ್ತದೆ.
ಮೊಟ್ಟೆಯಲ್ಲಿ ಸಲ್ಫರ್, ಫಾಸ್ಫರಸ್, ಸೆಲೆನಿಯಮ್, ಅಯೋಡಿನ್, ಸತು ಮತ್ತು ಪ್ರೋಟೀನ್ ಇದೆ. ಇದು ಕೂದಲನ್ನು ಬಲಪಡಿಸುತ್ತದೆ. ಡ್ಯಾಮೇಜ್ ಆಗಿರುವ ಕೂದಲನ್ನು ಸರಿಪಡಿಸಲು, ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡಲು ಮೊಟ್ಟೆ ಮತ್ತು ಮೊಸರು ಉಪಯುಕ್ತವಾಗಿದೆ.
ಒಂದು ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕವಾಗಿಸಿ. ಅದಕ್ಕೆ ನಾಲ್ಕು ಚಮಚ ಮೊಸರನ್ನು ಸೇರಿಸಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಸಿದ್ಧವಾದ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. 20-30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಶಾಂಪೂ ಬಳಸಿ ತಲೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪು ಕೂಡ ಬರುತ್ತದೆ.