ವಾಹನ ಚಾಲಕನ ಹುಚ್ಚು ಸಾಹಸದ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಹೊಳೆಗೆ ಅಡ್ಡಲಾಗಿ ಹಾಕಿದ್ದ ಎರಡು ಸಪೂರ ದಿಮ್ಮಿಗಳ ಮೇಳೆ ಈತ ವ್ಯಾನ್ ಅನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಈ ರೋಮಾಂಚನಕಾರಿ ವಿಡಿಯೋ ಟ್ವಿಟ್ಟರ್‌ನಲ್ಲಿ ಹರಿದಾಡ್ತಾ ಇದೆ.
ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಈಗಾಗ್ಲೇ 2 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಅನ್ನೋದು ಸ್ಪಷ್ಟವಾಗಿಲ್ಲ. ಚಾಲಕನ ಬಗ್ಗೆ ಕೂಡ ಹೆಚ್ಚಿನ ವಿವರಗಳು ಸಿಕ್ಕಿಲ್ಲ. ಇಂತಹ ಅಪಾಯಕಾರಿ ಸಾಹಸಕ್ಕೆ ಕೈಹಾಕಲು ಕಾರಣವೇನು ಅನ್ನೋದು ಕೂಡ ನಿಗೂಢವಾಗಿದೆ.
ವಿಡಿಯೋ ನೋಡಿದ ಟ್ವಿಟ್ಟರ್ ಬಳಕೆದಾರರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಚಾಲಕ ಉಕ್ಕಿನ ನರದವನೆಂದು ಕೆಲವರು ಅವನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಹುಚ್ಚು ಸಾಹಸವೆಂದು ಟೀಕಿಸಿದ್ದಾರೆ. ಸಾಕಷ್ಟು ಫನ್ನಿ ಕಮೆಂಟ್‌ಗಳು ಕೂಡ ಬಂದಿವೆ. ಈ ಹೀಗೆ ಪರ್ವತದ ತುದಿಗಳಲ್ಲಿ, ಅಪಾಯಕಾರಿ ತಿರುವುಗಳಲ್ಲಿ ಚಾಕಚಕ್ಯತೆಯಿಂದ ವಾಹನ ಚಲಾಯಿಸುವ ಹಲವು ವಿಡಿಯೋಗಳು ವೈರಲ್ ಆಗಿದ್ದವು.
ಈ ವಿಡಿಯೋ ಕೂಡ ಅವುಗಳನ್ನು ಮೀರಿಸುವಂತಿದೆ. ಅಸಾಧ್ಯವಾದ ಕೆಲಸವನ್ನು ತನ್ನ ಬುದ್ಧಿವಂತಿಕೆ ಹಾಗೂ ಧೈರ್ಯದಿಂದಲೇ ಮಾಡಿ ತೋರಿಸಿದ್ದಾನೆ ಈ ಚಾಲಕ. ಅಷ್ಟು ಚಿಕ್ಕ ದಿಮ್ಮಿಗಳ ಮೇಲೆ ಅದರಲ್ಲೂ ಹಿಮ್ಮುಖವಾಗಿ ವ್ಯಾನ್ ಚಲಾಯಿಸಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ.