ನಾಡಹಬ್ಬ ದಸರಾ ಸಮೀಪಿಸುತ್ತಿದೆ. ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಮಹೋತ್ಸವ ಈಗ ತನ್ನ ಎಂದಿನ ವೈಭವವನ್ನು ಮರಳಿ ಪಡೆದಿದೆ. ಮೈಸೂರಿನಲ್ಲಿ ಅದ್ದೂರಿ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಅಲ್ಲಿಗೆ ತೆರಳುವವರಿಗೆ ರೈಲ್ವೆ ಇಲಾಖೆ, ಗುಡ್ ನ್ಯೂಸ್ ನೀಡಿದೆ.
ನೈರುತ್ಯ ರೈಲ್ವೆ, ದಸರಾ ಸಂದರ್ಭದಲ್ಲಿ ಹೆಚ್ಚುವರಿ ರೈಲು ಸೇವೆ ನೀಡುವ ಉದ್ದೇಶದಿಂದ ವಿಶೇಷ ರೈಲುಗಳನ್ನು ಆರಂಭಿಸುತ್ತಿದೆ. ಮೈಸೂರು – ಕೆಎಸ್ಆರ್ ಬೆಂಗಳೂರು – ಮೈಸೂರು ನಡುವೆ ಕಾಯ್ದಿರಿಸದ ಎಕ್ಸ್ ಪ್ರೆಸ್ ಅಕ್ಟೋಬರ್ 5ರಂದು ರಾತ್ರಿ 11:30 ಕ್ಕೆ ಮೈಸೂರಿಂದ ಹೊರಟು ಮರುದಿನ ಬೆಳಗ್ಗೆ 2:45ಕ್ಕೆ ಬೆಂಗಳೂರು ತಲುಪಲಿದೆ.
ಅದೇ ರೀತಿ ಅಕ್ಟೋಬರ್ 6ರಂದು ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 6:20ಕ್ಕೆ ಮೈಸೂರು ತಲಪಲಿದೆ. ಮೈಸೂರು – ಚಾಮರಾಜನಗರ – ಮೈಸೂರು ನಡುವೆ ಕಾಯ್ದಿರಿಸದ ಎಕ್ಸ್ ಪ್ರೆಸ್ ಸೇವೆ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 6 ರ ವರೆಗೆ ಇರಲಿದೆ. ಮೈಸೂರಿನಿಂದ ಬೆಳಗ್ಗೆ 8-20ಕ್ಕೆ ಹೊರಡುವ ಈ ರೈಲು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ತಲುಪಲಿದೆ.
ಹಾಗೆಯೇ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 6ರ ವರೆಗೆ ಚಾಮರಾಜನಗರದಿಂದ ಬೆಳಗ್ಗೆ 10:55 ಕ್ಕೆ ಹೊರಡುವ ರೈಲು 12:25ಕ್ಕೆ ಮೈಸೂರು ತಲಪಲಿದೆ. ಅದೇ ರೀತಿ ಮೈಸೂರು – ಧಾರವಾಡ – ಮೈಸೂರು ಎಕ್ಸ್ ಪ್ರೆಸ್ ರೈಲು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6 ರ ವರೆಗೆ ಎರಡೂ ಕಡೆಯಿಂದ ಪ್ರಯಾಣ ಆರಂಭಿಸಲಿದೆ.