ಮೈಸೂರಿನ ಊಟಿ ರಸ್ತೆಯ ಜೆಪಿ ನಗರದಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರ ಈಗ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ನಡುವೆ ಪ್ರತಿಷ್ಠೆಯ ವಿಷಯವಾಗಿ ಮಾರ್ಪಾಟಾದಂತೆ ಕಂಡುಬರುತ್ತಿದೆ.
ಈ ಬಸ್ ತಂಗುದಾಣ ಗುಂಬಜ್ ಮಾದರಿಯಲ್ಲಿದೆ ಎಂದು ಆರೋಪಿಸಿದ್ದ ಸಂಸದ ಪ್ರತಾಪ್ ಸಿಂಹ, ಅದನ್ನು ತೆರವುಗೊಳಿಸದಿದ್ದರೆ ನಾನೇ ಜೆಸಿಬಿ ತಂದು ಒಡೆದು ಹಾಕುತ್ತೇನೆ ಎಂದು ಗುಡುಗಿದ್ದರು. ಅಲ್ಲದೆ ಶಾಸಕ ರಾಮದಾಸ್ ಈ ಕುರಿತು ಮೌನಕ್ಕೆ ಶರಣಾಗಿದ್ದು, ಅವರ ಸಮ್ಮತಿಯೂ ಇದೆ ಎಂಬಂತೆ ಕಾಣುತ್ತಿದೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕ ರಾಮದಾಸ್, ಮೈಸೂರಿನ ಪಾರಂಪರಿಕ ಸಂಸ್ಕೃತಿಯಂತೆ ಅರಮನೆ ಮಾದರಿಯಲ್ಲಿ ಈ ಬಸ್ ತಂಗುದಾಣ ನಿರ್ಮಿಸಲಾಗಿದೆ. ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದರು.
ಇದರ ಮಧ್ಯೆ ಈಗ ಮತ್ತೊಂದು ಬೆಳವಣಿಗೆ ನಡೆದಿದ್ದು, ಬಸ್ ತಂಗುದಾಣಕ್ಕೆ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣ ಎಂದು ಹೆಸರಿಸಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ ಹಾಗೂ ಲಿಂಗೈಕ್ಯ ರಾಜೇಂದ್ರ ಸ್ವಾಮೀಜಿಯವರ ಫೋಟೋವನ್ನು ಹಾಕಲಾಗಿದೆ.