ಬೆಂಗಳೂರು: ಶಾಲೆಗಳ ಪುನರಾರಂಭಕ್ಕೆ ಕೇವಲ ಐದು ದಿನ ಮಾತ್ರ ಬಾಕಿಯಿದೆ. ಮೇ 16 ರಿಂದ ಶಾಲೆಗಳು ಆರಂಭವಾಗಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ ಶಾಲಾ ಮಕ್ಕಳಿಗೆ ಪೂರೈಕೆಯಾಗಬೇಕಿದ್ದ ಪಠ್ಯಪುಸ್ತಕಗಳು ಇನ್ನೂ ಶಾಲೆಗೆ ಬಂದು ತಲುಪಿಲ್ಲ.
ಶೇ.54ರಷ್ಟು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ವಿತರಣೆಯೇ ಆಗಿಲ್ಲ. ಸಮಯಕ್ಕೆ ಸರಿಯಾಗಿ ಪುಸ್ತಕಗಳನ್ನೇ ನೀಡದೇ ಶಿಕ್ಷಣ ಇಲಾಖೆ ಶಾಲೆಗಳ ಆರಂಭಕ್ಕೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಗಿದೆ.
21 ಸಾವಿರ ಖಾಸಗಿ ಶಾಲೆಗಳು ಕೂಡ ತಮಗೆ ಇನ್ನೂ ಪಠ್ಯಪುಸ್ತಕ ಲಭ್ಯವಾಗಿಲ್ಲ. 6 ತಿಂಗಳ ಹಿಂದೆಯೇ ಹಣ ಪಾವತಿ ಮಾಡಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕೂಡ ಶಿಕ್ಷಣ ಇಲಾಖೆ ನಿರ್ಲಕ್ಷಕ್ಕೆ ಕಿಡಿಕಾರಿವೆ.
ಕೋವಿಡ್ ಕಾರಣದಿಂದ ಕಳೆದ ಒಂದುವರೆ ವರ್ಷದಿಂದ ಸರಿಯಾಗಿ ಶಾಲೆಗಳು ನಡೆದಿರಲಿಲ್ಲ. ಹಾಗಾಗಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಕರೆಯಲಾಗುತ್ತಿದ್ದು, ಮಕ್ಕಳ ಕಲಿಕೆ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ ಮೇ 16ರಿಂದ ಶಾಲೆ ಆರಂಭವಾದರೆ ಪಠ್ಯಪುಸ್ತಕಗಳು ಇಲ್ಲದೇ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಾದರೂ ಹೇಗೆ ಎಂಬುದು ಶಿಕ್ಷಕರ ಪ್ರಶ್ನೆ.