ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಸಂಪುಟ ವಿಸ್ತರಣೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಇದೀಗ ಸಂಪುಟ ಪುನಾರಚನೆಗೆ ದಿನಾಂಕ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ವೇಳೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪುಟ ಪುನಾರಚನೆಯ ನೀಲಿ ನಕ್ಷೆಯನ್ನು ಸಿಎಂ ಬೊಮ್ಮಾಯಿಗೆ ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಮೇ 10ರಂದು ಸಂಪುಟ ಪುನಾರಚನೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಈಗಿರುವ ಕೆಲವು ಪ್ರಮುಖ ಮಂತ್ರಿಗಳನ್ನು ಸಂಪುಟದಿಂದ ಹೊರಗಿಡುವಂತೆ ಅಮಿತ್ ಶಾ ಸಿಎಂ ಬೊಮ್ಮಾಯಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ. ಸೋಮಣ್ಣ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಬಾರಿಯ ಸಂಪುಟದಲ್ಲಿ ಕೆಲವು ಹೊಸ ಮುಖಗಳಿಗೆ ಸ್ಥಾನ ನೀಡುವ ಸಾಧ್ಯತೆಯಿದೆ. ಸಂಪುಟ ಪುನಾರಚನೆ ರೇಸ್ನಲ್ಲಿ ಅರವಿಂದ ಬೆಲ್ಲದ್, ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್, ಎನ್. ಮಹೇಶ್, ಪ್ರೀತಂ ಗೌಡ, ಪಿ. ರಾಜೀವ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ.