
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ರಾಜ್ಯ ಸರ್ಕಾರಗಳು ಕೂಡ ಶಾಕ್ ಮೇಲೆ ಶಾಕ್ ಕೊಡ್ತಾ ಇವೆ. ಮೇ 1ರಿಂದ ಕೇರಳದಲ್ಲಿ ಬಸ್, ಆಟೋ, ಟ್ಯಾಕ್ಸಿ ಪ್ರಯಾಣ ದರವೂ ಏರಿಕೆಯಾಗಲಿದೆ.
ಈಗಾಗ್ಲೇ ಕೆಲವು ನಗರಗಳಲ್ಲಿ ಊಬರ್ ಸೇರಿದಂತೆ ವಿವಿಧ ಕ್ಯಾಬ್ ಸೇವೆಗಳು ದುಬಾರಿಯಾಗಿವೆ. ಬಸ್ ಮತ್ತು ಆಟೋ ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆಯ ಕನಿಷ್ಠ ದರದಲ್ಲಿ ಹೆಚ್ಚಳವನ್ನು ಕೇರಳ ಸರ್ಕಾರ ಘೋಷಿಸಿದೆ.
ಇತರ ರಾಜ್ಯಗಳು ಕೂಡ ಶೀಘ್ರದಲ್ಲೇ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ನಿಚ್ಛಳವಾಗಿದೆ. ಕೇರಳ ಸಾರಿಗೆ ಇಲಾಖೆಯಲ್ಲಿ ಕನಿಷ್ಠ ಬಸ್ ಟಿಕೆಟ್ ದರ 8 ರೂಪಾಯಿ ಇತ್ತು, ಅದನ್ನು 10 ರೂಪಾಯಿಗೆ ಹೆಚ್ಚಿಸಲಾಗಿದೆ. ಇದಾದ ನಂತರ ಪ್ರತಿ ಕಿಲೋಮೀಟರ್‌ಗೆ 90 ಪೈಸೆಯಿಂದ 1 ರೂಪಾಯಿಗೆ ಏರಿಸಲು ಸರ್ಕಾರ ನಿರ್ಧರಿಸಿದೆ.
ವಿದ್ಯಾರ್ಥಿಗಳ ಟಿಕೆಟ್ ದರ ಹೆಚ್ಚಳದ ಬಗ್ಗೆ ಪರಿಶೀಲಿಸಲು ಆಯೋಗವನ್ನು ರಚಿಸಲಾಗಿದೆ. ಕೇರಳದಲ್ಲಿ ಆಟೋ ಪ್ರಯಾಣ ಕೂಡ ದುಬಾರಿಯಾಗಲಿದೆ. ಈವರೆಗೆ 1.5 ಕಿಮೀಗೆ 25 ರೂಪಾಯಿ ಇತ್ತು, ನಂತರ ಪ್ರತಿ ಕಿಮೀಗೆ 12 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಮೊದಲ 2 ಕಿಮೀಗೆ 30 ರೂಪಾಯಿ ಮಾಡಲಾಗಿದೆ. ನಂತರ ಪ್ರತಿ ಕಿಮೀಗೆ 15 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.
ಇದಲ್ಲದೇ 1,500 ಸಿಸಿ ಎಂಜಿನ್ ಸಾಮರ್ಥ್ಯದ ಕಾರುಗಳ ಮೊದಲ 5 ಕಿಲೋಮೀಟರ್‌ಗಳಿಗೆ ಕನಿಷ್ಠ ದರವನ್ನು 175 ರೂ.ನಿಂದ 200 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಕಾರುಗಳ ಕನಿಷ್ಠ ದರವನ್ನು 225 ರೂಪಾಯಿಗೆ ಹೆಚ್ಚಿಸಲಾಗಿದೆ. ಚಾಲಕರು ಪ್ರತಿ ಕಿಮೀಗೆ 17 ರೂಪಾಯಿ ಬದಲು 20 ರೂಪಾಯಿ ಪಡೆಯಬಹುದು.