ಮಂಡ್ಯ: ಇಂದಿನಿಂದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ ದೇವರ ಐತಿಹಾಸಿಕ ವೈರಮುಡಿ ಉತ್ಸವ ಆರಂಭವಾಗಲಿದೆ. ಆದರೆ ವೈರಮುಡಿ ಆಭರಣ ವಾಹನಕ್ಕೆ ಸ್ಥಾನಿಕರು ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಬೆಳಿಗ್ಗೆ 7 ಗಂಟೆಗೆ ವೈರಮುಡಿ ಹಾಗೂ ಆಭರಣ ವಾಹನ ಜಿಲ್ಲಾಡಳಿತದ ಖಜಾನೆಯಿಂದ ಮೇಲುಕೋಟೆಗೆ ಬರಬೇಕಿತ್ತು. ಆದರೆ ಈವರೆಗೂ ವಾಹನ ಬಂದಿಲ್ಲ. ಈ ಮಧ್ಯೆ ವಾಹನಕ್ಕೆ ಸ್ಥಾನಿಕ ಕುಟುಂಬದವರು ಅಡ್ಡಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನಾಲ್ಕನೇ ಸ್ಥಾನಿಕ ಕುಟುಂಬ ಮೇಲುಕೋಟೆಯಲ್ಲಿ ಅಡ್ಡಿಪಡಿಸಿದೆ. ರೂಢಿಯಂತೆ ಈ ಬಾರಿ 1ನೇ ಸ್ಥಾನಿಕರು ವೈರಮುಡಿ ತರುವ ಉಸ್ತುವಾರಿ ಹೊತ್ತಿದ್ದರು. ಕಳೆದಬಾರಿ ನಮಗೆ ಅವಕಾಶ ನೀಡಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಹಾಗಾಗಿ ವೈರಮುಡಿ ಉಸ್ತುವಾರಿ ತಮಗೆ ಕೊಡಬೇಕು ಎಂದು ನಾಲ್ಕನೇ ಸ್ಥಾನಿಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಜಿಲ್ಲಾಡಳಿತ ಹಾಗೂ ಸ್ಥಾನಿಕರ ನಡುವಿನ ಗೊಂದಲಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದಿಂದ ವೈರಮುಡಿ ಆಭರಣ ಹಸ್ತಾಂತರ, ವಿಶೇಷ ಪೂಜೆ ಬಳಿಕ ಇಂದು ಸಂಜೆಯಿಂದ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಆರಂಭವಾಗಲಿದೆ.