ಮನುಷ್ಯನಿಗೆ ಏನೇನೋ ವಿಚಿತ್ರ ಆಲೋಚನೆಗಳು, ಆಸೆಗಳಿರುತ್ತವೆ. ಆದರೆ, ಈ ಆಸೆಗಳೆಲ್ಲವೂ ಈಡೇರುವುದು ಕಡಿಮೆ.
ಇತ್ತೀಚೆಗೆ ಯುವತಿಯೊಬ್ಬಳು ತನಗೆ ತಾನೇ ಮದುವೆ ಮಾಡಿಕೊಂಡು ಹನಿಮೂನ್ ಗೂ ಹೋದ ಸುದ್ದಿಯನ್ನು ನಾವು ಓದಿದ್ದೇವೆ. ಹೀಗೆ ವಿಚಿತ್ರ ವಿಚಿತ್ರವಾಗಿ ವರ್ತಿಸುವವರು ರಾತ್ರೋರಾತ್ರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.
ಈಗ ಇಂತಹವರ ಸಾಲಿಗೆ ಇಂಡೋನೇಷ್ಯಾದ ವ್ಯಕ್ತಿ ಸೇರ್ಪಡೆಯಾಗಿದ್ದಾನೆ. ಅಂದಹಾಗೆ ಅವನು ಮಾಡಿರುವ ಘನಂಧಾರಿ ಕೆಲಸ ಏನೆಂದರೆ, ಮಹಿಳೆಯನ್ನು ಮದುವೆಯಾಗುವ ಬದಲು ಮೇಕೆಯನ್ನು ಮದುವೆಯಾಗಿದ್ದಾನೆ!
ಹೌದು. ಪೂರ್ವ ಜಾವಾದಲ್ಲಿನ ಗ್ರೆಸಿಕ್ ನ ಕ್ಲಂಪೋಕ್ ಗ್ರಾಮದ ನಿವಾಸಿ 44 ವರ್ಷದ ಸೈಫುಲ್ ಆರಿಫ್ ಎಂಬ ಯೂಟ್ಯೂಬರ್ ಹೆಣ್ಣು ಮೇಕೆಯನ್ನು ಮದುವೆಯಾಗಿದ್ದಾನೆ.
ಈ ಮೇಕೆಗೂ ಒಂದು ಹೆಸರಿದೆ. ಶ್ರೀ ರಹಾಯು ಬಿನ್ ಬೆಜೊ ಎಂಬ ಹೆಸರಿನ ಈ ಮೇಕೆಯೊಂದಿಗೆ ಆರಿಫ್ ಜೂನ್ 5 ರಂದು ಮದುವೆಯಾಗಿದ್ದಾನೆ.
ಮೇಕೆ ಮತ್ತು ಆರಿಫ್ ನ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆರಿಫ್ ಮಧುಮಗನ ಉಡುಪು ಧರಿಸಿದ್ದರೆ, ಮೇಕೆಗೆ ಶಾಲ್ ಹೊದಿಸಿರುವುದು ಕಂಡು ಬರುತ್ತದೆ. ಈ ಮದುವೆ ಸಮಾರಂಭದಲ್ಲಿ ಹಾಜರಿದ್ದವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು.
ಇನ್ನೊಂದು ವಿಶೇಷವೆಂದರೆ ಈತ ಮೇಕೆಯಿಂದಲೇ 22,000 ರೂಪೈ (ಭಾರತದ 117 ರೂಪಾಯಿ) ವರದಕ್ಷಿಣೆಯನ್ನೂ ಪಡೆದಿದ್ದಾನೆ!
ಇಷ್ಟೆಲ್ಲಾ ಓದಿದ ಮೇಲೆ ನಿಮಗೆ ಆತನ ಮೇಲೆ ಸಿಟ್ಟು ಮತ್ತು ಅಸಹ್ಯ ಆಗಿರಬೇಕಲ್ಲವೇ? ನಿಮ್ಮಂತೆಯೇ ಆನ್ ಲೈನ್ ನಲ್ಲಿ ನೆಟ್ಟಿಗರು ಕೋಪ ವ್ಯಕ್ತಪಡಿಸಿದ್ದಾರೆ.
ಅದಕ್ಕೆ ಆತ ಕೊಟ್ಟಿರುವ ಸ್ಪಷ್ಟೀಕರಣ ಇಂತಿದೆ.
“ನಾನು ವೃತ್ತಿಪರ ಯೂಟ್ಯೂಬರ್ ಆಗಿದ್ದೇನೆ. ನನ್ನ ಯೂಟ್ಯೂಬ್ ಗೊಂದು ಕಂಟೆಂಟ್ ಬೇಕಾಗಿತ್ತು. ಅದಕ್ಕೆ ಮೇಕೆಯನ್ನು ಮದುವೆಯಾಗುವ ಕಂಟೆಂಟ್ ನೀಡಿದರೆ ಹೇಗೆ ಎಂದು ಯೋಚನೆ ಮಾಡಿ ಈ ಪ್ರಹಸನವನ್ನು ಶೂಟ್ ಮಾಡಿ ಅಪ್ಲೋಡ್ ಮಾಡಿದ್ದೇನೆ. ಇದು ಕೇವಲ ಕಂಟೆಂಟ್ ಗಾಗಿ ಮಾಡಿದ ನಟನೆಯಷ್ಟೇ ಹೊರತು ಇದರ ಹಿಂದೆ ಯಾವುದೇ ಉದ್ದೇಶವಿಲ್ಲ’’.
ಈ ಮೂಲಕ ಆರಿಫ್ ನೆಟ್ಟಿಗರನ್ನು ಬೇಸ್ತು ಬೀಳಿಸಿದ್ದಾನೆ.