ಮೆದುಳು ನಿಷ್ಕ್ರಿಯಗೊಂಡಿದ್ದ 45 ವರ್ಷದ ಆಟೋ ಚಾಲಕನ ಕುಟುಂಬವು ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ ಪರಿಣಾಮ ನಾಲ್ವರ ಜೀವ ಉಳಿದಿದೆ. ಬಿಹಾರದ ಕರು ಸಿಂಗ್ ಜೂನ್ 30ರಂದು ತಮ್ಮ ಮಗಳ ಮದುವೆ ನಿಶ್ಚಿಯಸಲು ದೆಹಲಿಗೆ ಆಗಮಿಸಿದ್ದರು. ಸಂಬಂಧಿಕರ ಮನೆಯ ಟೆರಾಸ್ನಿಂದ ಬಿದ್ದಿದ್ದ ಕರು ಸಿಂಗ್ ಮೆದುಳು ನಿಷ್ಕ್ರಿಯಗೊಂಡಿತ್ತು.
ಜುಲೈ 1ರಂದು ಬೆಳಗ್ಗಿನ 1 ಗಂಟೆಗೆ ಅವರನ್ನು ದೆಹಲಿಯ ಏಮ್ಸ್ಗೆ ದಾಖಲು ಮಾಡಲಾಗಿತ್ತು. ಅದೇ ದಿನ ಇವರ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದರು. ಈ ಸಂದರ್ಭದಲ್ಲಿ ಕರು ಸಿಂಗ್ ಕುಟುಂಬಸ್ಥರಿಗೆ ಅಂಗಾಂಗ ದಾನ ಪ್ರಾಮುಖ್ಯತೆಯ ಬಗ್ಗೆ ತಿಳಿಸಲಾಯ್ತು. ಇದಕ್ಕೆ ಒಪ್ಪಿದ ಸಿಂಗ್ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಹಿ ಹಾಕಿದರು.
ನಮ್ಮ ತಂದೆಗೆ ಈ ರೀತಿ ಆಗಿದ್ದು ನಿಜಕ್ಕೂ ದುರಾದೃಷ್ಟಕರ. ಆದರೆ ಅವರ ಅಂಗಾಂಗ ದಾನದಿಂದ ನಮ್ಮ ದುಃಖ ಕೊಂಚ ಕಡಿಮೆಯಾಗಿದೆ. ಅವರ ಮೂತ್ರಪಿಂಡ, ಯಕೃತ್ತು ಹಾಗೂ ಹೃದಯವನ್ನು ಅವಶ್ಯವಿರುವವರಿಗೆ ದಾನ ಮಾಡಲಾಗಿದ್ದು ಇದರಿಂದ ನಾಲ್ವರಿಗೆ ಮರು ಜೀವ ಸಿಕ್ಕಂತಾಗಿದೆ. ಇದನ್ನು ನಾವು ಪುಣ್ಯದ ಕಾರ್ಯವೆಂದು ನಂಬಿದ್ದೇವೆ ಎಂದು ಕರು ಸಿಂಗ್ ಪುತ್ರಿ ಹೇಳಿದ್ದಾರೆ.