ಮಾರಣಾಂತಿಕ ಗಾಯಗಳಿಂದ ಮೆದುಳು ನಿರ್ಜೀವಗೊಂಡಿದ್ದ 16 ತಿಂಗಳ ಗಂಡು ಮಗುವಿನ ಅಂಗಾಂಗಗಳನ್ನು ಹೆತ್ತವರು ದಾನ ಮಾಡಿದ್ದಾರೆ. ಈ ಮೂಲಕ ಇಬ್ಬರು ರೋಗಿಗಳಿಗೆ ಮರು ಜೀವ ನೀಡಿದ್ದಾರೆ. 16 ತಿಂಗಳಿನ ಈ ಮಗು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಿದೆ.
ಮಗು ಮೇಲಿಂದ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿತ್ತು. ಮಗುವಿನ ಬ್ರೈನ್ ಡೆಡ್ ಆಗಿದ್ದರಿಂದ ವೈದ್ಯರು ಕೈಚೆಲ್ಲಿದ್ದಾರೆ. ಪೋಷಕರ ಸಮ್ಮತಿ ಮೇರೆಗೆ ಮಗುವಿನ ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಇತರ ಎರಡು ಮಕ್ಕಳಿಗೆ ಕಸಿ ಮಾಡಲಾಗಿದೆ. ಮಗುವಿನ ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ಏಮ್ಸ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
ಆಗಸ್ಟ್ 17 ರಂದು ಬಾಲಕ ರಿಶಾಂತ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಆತನ ತಂದೆ, ಖಾಸಗಿ ಗುತ್ತಿಗೆದಾರರಾಗಿರುವ ಉಪಿಂದರ್, ಮಗುವನ್ನು ಜಮುನಾ ಪಾರ್ಕ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅದೇ ದಿನ ಮಧ್ಯಾಹ್ನ ಮಗುವನ್ನು ಏಮ್ಸ್‌ನಲ್ಲಿರುವ ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್ ಟ್ರಾಮಾ ಸೆಂಟರ್‌ಗೆ ವರ್ಗಾಯಿಸಲಾಯಿತು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮಗು ಬದುಕುವುದು ಅನುಮಾನವಾಗಿತ್ತು.
8 ದಿನಗಳ ಕಾಲ ಮಗು ಜೀವನ್ಮರಣ ಹೋರಾಟ ನಡೆಸಿದೆ. ಸಿಟಿ ಸ್ಕ್ಯಾನ್‌ನಲ್ಲಿ ಮಗುವಿನ ಮೆದುಳಿಗೆ ಹಾನಿಯಾಗಿರುವುದು ದೃಢಪಟ್ಟಿತ್ತು. ಆಗಸ್ಟ್ 24 ರಂದು ಮಗುವಿಗೆ ಬ್ರೈನ್ ಡೆಡ್ ಎಂದು ಘೋಷಿಸಲಾಯಿತು. ಮಗುವನ್ನು ಕಳೆದುಕೊಂಡು ಅತೀವ ದುಃಖದಲ್ಲಿದ್ದ ಕುಟುಂಬಕ್ಕೆ ಅಂಗಾಂಗ ದಾನದ ಬಗ್ಗೆ ಆರ್ಗನ್ ರಿಟ್ರೀವಲ್ ಬ್ಯಾಂಕಿಂಗ್ ಆರ್ಗನೈಸೇಶನ್ ವೈದ್ಯರು ಮತ್ತು ಕಸಿ ಸಂಯೋಜಕರು ಸಲಹೆಗಳನ್ನು ನೀಡಿದ್ರು. ಅಂಗಾಂಗ ದಾನದ ಬಗ್ಗೆ ಮಾಹಿತಿ ಕೊಟ್ಟರು. ಈ ಕೌನ್ಸೆಲಿಂಗ್ ನಂತರ ಮಗುವಿನ ಅಂಗಾಂಗ ದಾನಕ್ಕೆ ಹೆತ್ತವರು ಒಪ್ಪಿಗೆ ನೀಡಿದ್ದಾರೆ.
ಗುರುವಾರ 2 ಗಂಟೆಗೆ ಅಂಗಾಂಗಳ ಪಡೆಯುವಿಕೆ ಪ್ರಾರಂಭವಾಯಿತು. ಇಬ್ಬರು ರೋಗಿಗಳಿಗೆ ಅವುಗಳನ್ನು ಕಸಿ ಸಹ ಮಾಡಲಾಗಿದೆ. ಈ ಮಗುವಿನಿಂದ ಪಡೆದ ಎರಡೂ ಕಿಡ್ನಿಗಳನ್ನು ಏಮ್ಸ್‌ನಲ್ಲಿ ಐದು ವರ್ಷದ ಬಾಲಕನಿಗೆ ಕಸಿ ಮಾಡಲಾಗಿದೆ. ಮ್ಯಾಕ್ಸ್ ಆಸ್ಪತ್ರೆಯಲ್ಲಿ ಆರು ತಿಂಗಳ ಹೆಣ್ಣು ಮಗುವಿಗೆ ಯಕೃತ್ತನ್ನು ಕಸಿ ಮಾಡಲಾಗಿದೆ. ರಿಶಾಂತ್ ಆರನೇ ಮಗುವಾಗಿ ಜನಿಸಿದ್ದ. ಮಗುವನ್ನು ಕಳೆದುಕೊಂಡು ನೋವಿನಲ್ಲಿದ್ದ ಹೆತ್ತವರು ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದಿದ್ದಾರೆ.