ಒತ್ತಡ ಮತ್ತು ಆತಂಕದ ಸಮಸ್ಯೆಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ಬಹುಮುಖ್ಯವಾದ ವಿಷಯವನ್ನೇ ಮರೆತುಬಿಡುವುದು, ಕೆಲಸದಲ್ಲಿ ಅನಾಸಕ್ತಿ ಇವೆಲ್ಲವೂ ಒತ್ತಡದ ಲಕ್ಷಣಗಳು. ಇದಕ್ಕೆ ಕಾರಣ ನಮ್ಮ ಜೀವನಶೈಲಿಗೆ ಸಂಬಂಧಿಸಿದ ಕೆಲವು ಅಭ್ಯಾಸಗಳು. ಈ ದುರಭ್ಯಾಸಗಳು ನಮಗೆ ಮಾನಸಿಕವಾಗಿ ಹಾನಿಯನ್ನುಂಟುಮಾಡುತ್ತವೆ. ನಮ್ಮ ಮೆದುಳನ್ನೇ ದುರ್ಬಲಗೊಳಿಸುತ್ತವೆ.
ನಿದ್ರೆಯ ಕೊರತೆ – ಪ್ರತಿದಿನ 7-8 ಗಂಟೆಗಳ ಕಾಲ ನಿದ್ದೆ ಮಾಡದಿದ್ದರೆ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮನಸ್ಸು ಕೂಡ ಮಂದವಾಗುತ್ತಾ ಹೋಗುತ್ತದೆ. ಹಾಗಾಗಿ ಸಾಕಷ್ಟು ನಿದ್ರೆ ಮಾಡಿ.
ಅತಿಯಾದ ಮದ್ಯ ಸೇವನೆ – ಅತಿಯಾಗಿ ಆಲ್ಕೋಹಾಲ್ ಸೇವಿಸುವ ಅಭ್ಯಾಸವಿದ್ದರೆ ಅದರ ಪರಿಣಾಮ ಕ್ರಮೇಣ ಮನಸ್ಸಿನ ಮೇಲಾಗುತ್ತದೆ. ಇದು ನೆನಪಿನ ಶಕ್ತಿಯನ್ನೇ ಹಾಳುಮಾಡುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡಬೇಕು.
ವಿಪರೀತ ಹಾಡು ಕೇಳುವ ಅಭ್ಯಾಸ – ಕೆಲವರು ಯಾವಾಗಲೂ ಹಾಡುಗಳನ್ನು ಕೇಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲಸ ಮಾಡುವಾಗಲೂ ಇಯರ್ ಫೋನ್ ಹಾಕಿಕೊಂಡು ಅಥವಾ ದೊಡ್ಡದಾಗಿ ಹಾಡುಗಳನ್ನು ಹಾಕಿಕೊಂಡು ಆನಂದಿಸುತ್ತಾರೆ. ಆದರೆ ಅತಿಯಾಗಿ ಹಾಡುಗಳನ್ನು ಕೇಳುವ ಅಭ್ಯಾಸ ಮನಸ್ಸನ್ನು ದುರ್ಬಲಗೊಳಿಸುತ್ತದೆ. ಇದು ಮನಸ್ಸಿನ ಮೇಲೆ ಮಾತ್ರವಲ್ಲದೆ ಕಿವಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಜಂಕ್ ಫುಡ್ ಸೇವನೆ – ಹೆಚ್ಚು ಜಂಕ್ ಫುಡ್ ಸೇವಿಸಿದರೆ ಅದು ಕೂಡ ಮೆದುಳಿನ ಸಾಮರ್ಥ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಜಂಕ್ ಫುಡ್ ತಿನ್ನುವ ಅಭ್ಯಾಸವನ್ನು ಸಾಧ್ಯವಾದಷ್ಟು ನಿಯಂತ್ರಿಸಿ.